ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಹಿಮಚ್ಛಾದಿತ ಗುಲ್ ಮಾರ್ಗ್ನ ನೈಸರ್ಗಿಕ ಸೌಂದರ್ಯದ ಮಧ್ಯೆ ಫ್ಯಾಷನ್ ಶೋ ನಡೆದಿದ್ದು, ಮಾಡೆಲ್‌ಗಳು ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಇತ್ತ ಈ ಫ್ಯಾಷನ್ ಶೋ ಅನ್ನು ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ. ಅವರು ಇದನ್ನು “ಅಶ್ಲೀಲ” ಮತ್ತು ಕಣಿವೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ನೀತಿಗಳಿಗೆ ವಿರುದ್ಧವಾಗಿದೆ ಎಂದು ಬಣ್ಣಿಸಿದ್ದಾರೆ.
ಫ್ಯಾಷನ್ ಶೋಗೆ ಆಕ್ಷೇಪ ಯಾಕೆ?
ಇಡೀ ವಿಶ್ವದಲ್ಲಿ ಸದ್ಯ ರಂಜಾನ್ ಹಿನ್ನೆಲೆಯಲ್ಲಿ ಪವಿತ್ರ ವ್ರತ ಆಚರಿಸಲಾಗುತ್ತಿದೆ. ರಂಜಾನ್ ಸಂದರ್ಭದಲ್ಲಿ ಧಾರ್ಮಿಕ ಭಾವನೆಗೆ ಬೆಲೆ ಕೊಡದೇ ಫ್ಯಾಷನ್ ಶೋ ನಡೆಸಲಾಗುತ್ತಿದೆ ಅನ್ನೋದು ಮೂಲಭೂತವಾದಿಗಳ ಆಕ್ಷೇಪ. ಫ್ಯಾಷನ್ ಶೋ ಹೆಸರಲ್ಲಿ ಅಶ್ಲೀಲತೆ ಪ್ರದರ್ಶನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಜಮ್ಮು ವಿಧಾನಸಭಾ ಅಧಿವೇಶನದಲ್ಲೂ ಈ ಫ್ಯಾಷನ್ ಶೋ ಗದ್ದಲಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಗುಲ್ ಮಾರ್ಗ್ ಫ್ಯಾಷನ್ ಶೋ ಬಗ್ಗೆ ಸಿಎಂ ಒಮರ್ ಅಬ್ದುಲ್ಲಾ ಅವರು ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಕಳೆದ ಮಾರ್ಚ್ 7ರಂದು ಗುಲ್‌ಮಾರ್ಗ್‌ನಲ್ಲಿ ಆಯೋಜಿಸಲಾಗಿದೆ. ಈ ಫ್ಯಾಷನ್ ಶೋ ಅನ್ನು ಇದೇ ತಿಂಗಳಲ್ಲಿ ಮಾಡಲು ಸರ್ಕಾರ ಯಾವುದೇ ಅನುಮತಿ ನೀಡಿಲ್ಲ. ಇದರಲ್ಲಿ ಸರ್ಕಾರದ್ದು ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆಯಾದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದೆ.