ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆದ್ದಾರಿ ಬಳಸುವ ಕಾರು ಮತ್ತಿತರ ವಾಹನಗಳ ಮುಂಭಾಗದ ವಿಂಡ್ಶೀಲ್ಡ್ ಮೇಲೆ ಫಾಸ್ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದ್ದು, ಒಂದು ವೇಳೆ ನಿಯಮ ಪಾಲಿಸದಿದ್ದರೆ ಎರಡು ಪಟ್ಟು ಹೆಚ್ಚು ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೆ, ಇಂತಹ ವಾಹನಗಳನ್ನು ಬ್ಲ್ಯಾಕ್ಲಿಸ್ಟ್ ಕೂಡ ಸೇರ್ಪಡೆಗೊಳಿಸುವ ಕಠಿಣ ನಿಯಮವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂಪಿಸಿದೆ.
ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಎನ್ಎಚ್ಐಎ, ಫಾಸ್ಟ್ಯಾಗ್ ಅಂಟಿಸದಿರುವುದರಿಂದ ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಉಂಟು ಮಾಡುವುದರಿಂದ ಇತರ ಜನರಿಗೆ ಅನಾನುಕೂಲತೆ ಉಂಟಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂಭಾಗದ ವಿಂಡ್ಶೀಲ್ಡ್ನಲ್ಲಿ ಫಾಸ್ಟ್ಯಾಗ್ ಅಳವಡಿಸದಿದ್ದಲ್ಲಿ ಡಬಲ್ ಟೋಲ್ ತೆರಿಗೆಯನ್ನು ಸಂಗ್ರಹಿಸಲು ಎಲ್ಲಾ ಏಜೆನ್ಸಿಗಳಿಗೆ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ನೀಡಲಾಗಿದೆ.
ಅಷ್ಟೇ ಅಲ್ಲದೆ, ವಾಹನದ ಮುಂಭಾಗದ ವಿಂಡ್ಶೀಲ್ಡ್ನಲ್ಲಿ ಸ್ಥಿರವಾದ ಫಾಸ್ಟ್ಟ್ಯಾಗ್ ಇಲ್ಲದೆ ಟೋಲ್ ಲೇನ್ಗೆ ಪ್ರವೇಶಿಸಿದರೆ ದಂಡ ವಿಧಿಸುವ ಬಗ್ಗೆ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಈ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ.