ಬೈಕ್- ಟಿಪ್ಪರ್ ನಡುವೆ ಭೀಕರ ಅಪಘಾತ: ಶಿಕ್ಷಕಿ ಸಾವು, ಅಪಾಯದಿಂದ ಮಗು ಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಹೊರವಲಯದ ಪುತ್ತೂರಿನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಬೈಕ್ ಹಾಗೂ ಟಿಪ್ಪರ್ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರ, ಮಾಣಿ ಖಾಸಗಿ ಶಾಲಾ ಶಿಕ್ಷಕಿ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಮದಕ ಸುರೇಶ್ ಕುಲಾಲ್ ಪತ್ನಿ ಅನಿತಾ(35) ಮೃತಪಟ್ಟವರು.

ಮಾಣಿ ಸಮೀದ ಗಡಿಯಾರ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಅನಿತಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಚಿಕಿತ್ಸೆ ಪಡೆದು ಬೈಕ್‍ನಲ್ಲಿ ಹಿಂತಿರುಗುವ ವೇಳೆ ಕಬಕ ಸಮೀಪ ಪೋಳ್ಯ ಎಂಬಲ್ಲಿ ಏಕಾಏಕಿ ಬಂದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರ ಅನಿತಾ ಹಾಗೂ ಅವರು ಮಗು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೊಳುವಾರು ಮಹಾವೀರ ಆಸ್ಪತ್ರೆಗೆ ಕರೆ ತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟರು. ಜೊತೆಗಿದ್ದ ಮಗುವಿನ ಭುಜದ ಭಾಗಕ್ಕೆ ಸಣ್ಣ ಪುಟ್ಟ ಗಾಯವಾಗಿದ್ದು, ಸುರೇಶ್ ಕುಲಾಲ್‍ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮೃತರ ಪತಿ ಸುರೇಶ್ ಕುಲಾಲ್ ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ ಸುರೇಶ್ ಕುಲಾಲ್, ಪುತ್ರಿ ಋತ್ವಿಯವರನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!