ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ತಂದೆಯನ್ನು ಕೊಂದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಚಿಕ್ಕೋಡಿ ಸಮೀಪದ ಉಮರಾಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮ್ಮ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಂತರ ಶ್ರೀಮಂತ ಇಟ್ನಾಲೆ ಎಂದು ಗುರುತಿಸಲಾದ ವ್ಯಕ್ತಿಯನ್ನು ಆತನ ಪತ್ನಿ ಸಾವಿತ್ರಿ ಎಂಬುವವರು ಕೊಂದಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಕುಡಿತದ ಚಟಕ್ಕೆ ಬಿದ್ದಿದ್ದ ಶ್ರೀಮಂತ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಇದನ್ನ ಸಹಿಸಲಾಗದೆ ಸಾವಿತ್ರಿ ಮಧ್ಯಪ್ರವೇಶಿಸಿ, ಭಾರವಾದ ವಸ್ತುವಿನಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಶ್ರೀಮಂತ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಆಕೆ, ಆತನ ದೇಹವನ್ನು ತುಂಡರಿಸಿ ಹತ್ತಿರದ ಕೃಷಿಭೂಮಿಯಲ್ಲಿ ಎಸೆದಿದ್ದಳು. ಯಾರೋ ಕೊಂದಿದ್ದಾರೆ ಎಂದು ಆರೋಪಿಸುವ ಮೂಲಕ ಆಕೆ ಅಧಿಕಾರಿಗಳನ್ನು ದಾರಿತಪ್ಪಿಸಲು ಯತ್ನಿಸಿದಳು ಎಂದು ಪೊಲೀಸ್ ತನಿಖೆಗಳು ತಿಳಿಸಿವೆ.
ಘಟನೆ ನಡೆದ ಸ್ಥಳವನ್ನು ಸ್ವಚ್ಛಗೊಳಿಸಿದ ಸಾವಿತ್ರಿ, ಆಯುಧವನ್ನು ಬಚ್ಚಿಟ್ಟಿದ್ದಳು. ಮೃತ ಪತಿಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದ ಸಾವಿತ್ರಿ, ಘಟನೆಗೆ ಸಂಬಂಧಿಸಿದ ಯಾವುದನ್ನೂ ಯಾರಿಗೂ ಬಹಿರಂಗಪಡಿಸದಂತೆ ಮಗಳಿಗೆ ಸೂಚಿಸಿದ್ದಳು. ಶವವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಬಂಧಿಸಿದ್ದಾರೆ.