ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು: ಸೇತುವೆ ಕುಸಿತ, ಮಡಿಕೇರಿ-ಮಂಗಳೂರು ಸಂಪರ್ಕ ಕಡಿತದ ಭೀತಿ

ಹೊಸದಿಗಂತ ವರದಿ, ಮಡಿಕೇರಿ:
ಜಿಲ್ಲೆಯ ಗಡಿಭಾಗವಾದ ಸಂಪಾಜೆ‌ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ -ಕೊಯನಾಡು ನಡುವೆ ರಸ್ತೆಯಲ್ಲಿ ಭಾರೀ ಬಿರುಕು ಕಾಣಿಕೊಂಡಿದ್ದು, ಮತ್ತೊಂದೆಡೆ ಕೊಯನಾಡು ಸೇತುವೆ ಕುಸಿಯುವ ಭೀತಿ ಎದುರಾಗಿದೆ.
ಭಾರೀ ಮಳೆಗೆ ಕೊಯನಾಡಿನ ಗಣಪತಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಒಂದು ಬದಿ ರಸ್ತೆ ಕುಸಿದಿದ್ದು, ಈ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಿರಂತರವಾಗಿ ಮಳೆಯಾದರೆ ಮತ್ತೆ ಕುಸಿಯುವ ಆತಂಕವಿದ್ದು, ವಾಹನ ಸವಾರರು ಆತಂಕದಿಂದಲೇ ಪ್ರಯಾಣಿಸುತ್ತಿದ್ದಾರೆ.
ದೇವರಕೊಲ್ಲಿ-ಕೊಯನಾಡು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಮನೆ ಮೇಲೆ ಬರೆ- ಮರ ಬಿದ್ದು ಹಾನಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಚೆಟ್ಟಳ್ಳಿ ಪಂಚಾಯಿತಿಯ ಪೊನ್ನತ್’ಮೊಟ್ಟೆಯಲ್ಲಿ ಮನೆಯೊಂದರ ಮೇಲೆ ಬರೆ ಹಾಗೂ ಮರ ಬಿದ್ದು ಹಾನಿಯಾಗಿದೆ.
ಪೊನ್ನತ್’ಮೊಟ್ಟೆಯ ಅಜೀಜ್ ಮತ್ತು ಫಾತಿಮಾ ದಂಪತಿಯ ಮನೆಯ ಹಿಂಬದಿಯ ಬರೆ ಕುಸಿದು ಬರೆಯಲ್ಲಿದ್ದ ಮರವೊಂದು ಮನೆ ಮೇಲೆ ಬಿದ್ದಿದೆ.
ಹಿಂದಿನ ಮಳೆಯಲ್ಲಿ ಮನೆಯ ಹಿಂಬದಿಯ ಅಡುಗೆ ಮನೆಯ ಬಳಿ ನೆಲ ಬಿರುಕು ಉಂಟಾಗಿ, ಮನೆ ಅಪಾಯ ಸ್ಥಿತಿಯಲ್ಲಿದ್ದುದರಿಂದ ಮನೆಯಲ್ಲಿದ್ದ ಆರು ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಕೆಲ ದಿನಗಳ ಬಳಿಕ ಮಳೆ ಕಡಿಮೆಯಾದ ಪರಿಣಾಮ, ಕುಟುಂಬವನ್ನು ಮರಳಿ ಅವರ ಮನೆಗೆ ಕಳುಹಿಸಿಕೊಡಲಾಗಿತ್ತು .
ಆದರೆ ಮಂಗಳವಾರ ರಾತ್ರಿ ಗ್ರಾಮದಲ್ಲಿ ಸುರಿದ ಮಳೆಗೆ ಬರೆ ಕುಸಿತ ಉಂಟಾಗಿದ್ದು, ಮನೆಯಲ್ಲಿದ್ದ ಸಾಮಾಗ್ರಿಗಳಿಗೆ ನಷ್ಟ ಉಂಟಾಗಿದೆ. ಮನೆಯೂ ಅಪಾಯದ ಸ್ಥಿತಿಗೆ ತಲುಪಿರುವುದರಿಂದ ವಾಸಕ್ಕೆ ಅಯೋಗ್ಯವಾಗಿದೆ. ಮನೆಯಲ್ಲಿ ಒಬ್ಬರು ಬಾಣಂತಿ ಮತ್ತು ಎರಡು ತಿಂಗಳ ಹಸುಗೂಸು ಇದ್ದು ಕುಟುಂಬದವರ ಬದುಕು ಬೀದಿಗೆ ಬರುವಂತಾಗಿದೆ .
ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾದ ನಾಗೇಂದ್ರ,ಸುಶೀಲಾ ಪಂಚಾಯಿತಿ ಸದಸ್ಯರಾದ ರಸೀನಾ, ಕಾಂಗ್ರೆಸ್ ವಲಯ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!