ಕಾಲೇಜು ಪ್ರಿನ್ಸಿಪಾಲ್‌ನ ನಿಂದನೆಗೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಹೊಸದಿಗಂತ ವರದಿ ಹಾವೇರಿ:

ಕಾಲೇಜು ಪ್ರಾಚಾರ್ಯರು ಅವಮಾನಿಸಿದರೆಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಾಚಾರ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ವಿದ್ಯಾರ್ಥಿ ಕುಟುಂಬ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು, ಹಾನಗಲ್ಲ ತಾಲೂಕು ಡೊಳ್ಳೇಶ್ವರ ಗ್ರಾಮದಿಂದ ಆದಿತ್ಯ ರಘುವಿರ ಚವ್ಹಾಣ ಎಂಬ ವಿದ್ಯಾರ್ಥಿ ಹಾನಗಲ್ಲ ನಗರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಧ್ಯಯನ ಮಾಡುತ್ತಿದ್ದನು.

ಈ ವೇಳೆ ಅಲ್ಲಿನ ಮಹಿಳಾ ಪ್ರಾಚಾರ್ಯರು ವಿದ್ಯಾರ್ಥಿ ಆದಿತ್ಯನ್ನು ಅಪಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದ ಆದಿತ್ಯ, ಮೈಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕುಟುಂಬಸ್ಥರು ಮತ್ತು ಸ್ನೇಹಿತರು ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ತನಗೆ ಮಹಿಳ ಪ್ರಾಚಾರ್ಯರು ಅವಮಾನಿಸಿದ ಬಗ್ಗೆ ತಿಳಿಸಿದ್ದ. ಆದರೆ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕೆಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.

ಬಾಲಕನ ಮೇಲೆ ಮಾನಸಿಕ ಒತ್ತಡ ಹೇರಿದ ಪ್ರಾಚಾರ್ಯರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಈ ಕುರಿತು ಹಾನಗಲ್ಲ ಠಾಣೆಯಲ್ಲಿ ಕ್ರೈಮ್ ನಂ.290/2023ರಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಸಹ ಆರೋಪಿ ಮಹಿಳಾ ಪ್ರಾಚಾರ್ಯರನ್ನು ಬಂಧಿಸುವಲ್ಲಿ ಪೋಲಿಸರು ವಿಫಲರಾಗಿದ್ದಾರೆ. ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಮಹಿಳಾ ಪ್ರಾಚಾರ್ಯರನ್ನು ಬಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮೃತ ಬಾಲಕನ ತಂದೆ ರಘುವೀರ ಚವ್ಹಾಣ, ಸಂಘಟನೆಯ ಜಿಲ್ಲಾಧ್ಯಕ್ಷ ಹನುಮಂತ ಭೋವಿ, ಪ್ರಕಾಶ ಕೆಮ್ಮನ್ನವರ, ಮೌಲಾಲಿ ನವಲಗುಂದ, ಆಕಾಶ್ ಆರ್, ನಿತೀನ್ ಕೊತ್ವಾಲ್ ಸೇರಿದಂತೆ ಸುಮಾರು ೭೪ಕ್ಕೂ ಹೆಚ್ಚು ಜನರು ಸಹಿ ಮಾಡಿದ ಮನವಿ ಪತ್ರವನ್ನು ಎಸ್ಪಿಗೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!