ಹೊಸದಿಗಂತ ವರದಿ, ಮಡಿಕೇರಿ:
ಕೊಡವ ಸಮಾಜಗಳ ಒಕ್ಕೂಟದಿಂದ ಆಯೋಜಿಸಲಾಗಿದ್ದ ಕೊಡವ ನಮ್ಮೆಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಆಟಗಾರರನ್ನು ಅಮಾನತುಗೊಳಿಸಿರುವ ಹಾಕಿ ಕೂರ್ಗ್ ಸಂಸ್ಥೆಯ ನಡೆಗೆ ಕೊಡವ ಸಮಾಜಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.
ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಖಂಡನೆ ವ್ಯಕ್ತಗೊಂಡಿತು.
ನ.17 ರಿಂದ 20 ರವರೆಗೆ ನಡೆದ ಕೊಡವ ನಮ್ಮೆಯಲ್ಲಿ ಆಯೋಜಿಸಲಾಗಿದ್ದ ಅಂತರ್ ಕೊಡವ ಸಮಾಜದ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಸಾಯಿ ವಿದ್ಯಾರ್ಥಿಗಳು ಹಾಗೂ ಲೀಗ್ ಪಂದ್ಯಾವಳಿಯಲ್ಲಿ ಆಡಿದ ಮಕ್ಕಳನ್ನು ಆಟಕ್ಕೆ ಕಳುಹಿಸದೆ ತಡೆ ಹಿಡಿದು ಮತ್ತು ಆಟ ಆಡಿದ ಮಕ್ಕಳನ್ನು ಅಮಾನತು ಮಾಡಿರುವ ಹಾಕಿ ಕೂರ್ಗ್ ಸಂಸ್ಥೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಹಾಕಿ ಆಟಗಾರರನ್ನು ಅಮಾನತುಗೊಳಿಸಿ ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಮೂಲಕ ಸಂಸ್ಥೆಯ ಪದಾಧಿಕಾರಿಗಳು ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ್ದಾರೆ ಎಂದು ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರುಗಳು ಅಸಮಾಧಾನ ವ್ಯಕ್ತಪಡಿಸಿದರು.
ಪದಾಧಿಕಾರಿಗಳು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ, ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ, ಉಪಾಧ್ಯಕ್ಷರಾದ ಮಲಚ್ಚೀರ ಬೋಸ್, ಮಾಳೇಟಿರ ಅಭಿಮನ್ಯು ಕುಮಾರ್, ಕರವಟ್ಟೀರ ಪೆಮ್ಮಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ ಹಾಗೂ ದೇಶ ತಕ್ಕರಾದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ