ಹೊಸದಿಗಂತ ವರದಿ ,ಮಂಡ್ಯ :
ಭ್ರೂಣ ಹತ್ಯೆ ಪ್ರಕರಣದಲ್ಲಿ ಕಿಂಗ್ ಪಿನ್‌ಗಳೆನ್ನಲಾದ ಪ್ರಮುಖ ಆರೋಪಿಗಳಿಬ್ಬರು ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಂಡವಪುರ ತಾಲೂಕು ಎಂ. ಶೆಟ್ಟಿಹಳ್ಳಿ ಗ್ರಾಮದ ಅಭಿಷೇಕ್, ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಗ್ರಾಮದ ವೀರೇಶ್ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ ಎಂದರು.
ಉಳಿದಂತೆ ಪುಟ್ಟರಾಜು, ಕುಮಾರ, ಶಾರದಮ್ಮ, ದಾಸೇಗೌಡ, ಲ್ಯಾಬ್‌ಸತ್ಯ, ಮೀನಾ, ಮಲ್ಲಿಕಾರ್ಜುನ, ಸೋಮಶೇಖರ್, ರತ್ನಮ್ಮ, ಪ್ರೇಮ ಉ. ಪಾರ್ವತಿ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. 12 ಮಂದಿ ಆರೋಪಿಗಳು ಸೇರಿದಂತೆ ಒಟ್ಟಾರೆ ಈ ಪ್ರಕರಣದಲ್ಲಿ 32 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಸುಮಾರು 23 ಲಕ್ಷ ರೂ. ವೌಲ್ಯದ 2 ಸ್ಕ್ಯಾನಿಂಗ್ ಉಪಕರಣಗಳು, 3 ಕಾರು, 3 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.