ಹೊಸದಿಗಂತ ವರದಿ ,ಪುತ್ತೂರು:
ಫೇಸ್‍ಬುಕ್‍ವೊಂದರಲ್ಲಿ ತನ್ನ ಸಂಬಂಧಿಕರ ಹೆಸರಿನಲ್ಲಿ ಮೆಸೆಂಜರ್‍ಗೆ ಬಂದ ಸಂದೇಶ ಅಸಲಿಯೆಂದು ನಂಬಿ ವ್ಯವಹಾರ ಮುಂದುವರಿಸಿ ಪುತ್ತೂರು ತಾಲೂಕು ಪಂಚಾಯತ್‍ನ ಸಿಬ್ಬಂದಿಯೋರ್ವರು ರೂ.10 ಸಾವಿರ ನಗದನ್ನು ಕಳೆದುಕೊಂಡ ಘಟನೆ ನಡೆದಿದೆ.
ಪೆರ್ಲಂಪಾಡಿ ನಿವಾಸಿ ಪುತ್ತೂರು ತಾ.ಪಂ. ಉದ್ಯೋಗಿಯಾಗಿರುವ ಭರತ್‍ರಾಜ್ ಅವರಿಗೆ ಕೆಲವು ದಿನಗಳ ಹಿಂದೆ ರಾಧಾಕೃಷ್ಣ ಎಂಬ ಹೆಸರಿನಲ್ಲಿ ಫೇಸ್‍ಬುಕ್ ರಿಕ್ವೆಸ್ಟ್ ಬಂದಿತ್ತು. ಫೇಸ್‍ಬುಕ್ ಪ್ರೊಫೈಲ್ ನಲ್ಲಿದ್ದ ಫೋಟೋ ರಾಧಾಕೃಷ್ಣ ಅವರು ದೂರದ ಸಂಬಂಧಿ ಆಗಿದ್ದ ಕಾರಣ ಫ್ರೆಂಡ್ ರಿಕ್ವೆಸ್ಟ್‍ಗೆ ಒಪ್ಪಿಗೆ ಸೂಚಿಸಿದ್ದರು. ಆ.31ರಂದು ರಾಧಾಕೃಷ್ಣ ಅವರು ಮೆಸೇಂಜರ್ ಮೂಲಕ ಭರತ್‍ರಾಜ್‍ಗೆ ಬೆಂಗಳೂರಿನಲ್ಲಿ ಸಿಆರ್‍ಪಿ ಯೋಧನಾಗಿರುವ ನನ್ನ ಮಿತ್ರನಿಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿದೆ. ಅವರ ಮನೆಯಲ್ಲಿರುವ ಗೃಹಯೋಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಂಗ್ಲ ಭಾಷೆಯಲ್ಲಿ ಸಂದೇಶ ಕಳುಹಿಸಿದ್ದರು. ಇದಕ್ಕೆ ಒಕೆ ಎಂದಿದ್ದಕ್ಕೆ ನಿಮ್ಮ ನಂಬರ್ ಕಳುಹಿಸುವಂತೆ ಸೂಚಿಸಿದ್ದರು. ಭರತ್‍ರಾಜ್ ತನ್ನ ನಂಬರ್ ಕಳುಹಿಸಿದ್ದರು.
ಸೆ.1ರಂದು ಅಪರಿಚಿತ ಕರೆ ಬಂದಾಗ ಅದನ್ನು ಸ್ವೀಕರಿಸದ ಭರತ್‍ರಾಜ್ ಅವರಿಗೆ ವಾಟ್ಸಪ್ ಸಂದೇಶದ ಮೂಲಕ ತಾನು ಯೋಧ ಸಂತೋಷ್ ಎಂದು ಪರಿಚಯಿಸಿದಲ್ಲದೆ ರಾಧಾಕೃಷ್ಣ ಅವರು ನಂಬರ್ ಕೊಟ್ಟಿದ್ದಾರೆ ಎಂದಿದ್ದರು. ಬಳಿಕ ಕರೆ ಮಾಡಿ ಇನ್‍ವರ್ಟರ್, ಡೈನಿಂಗ್ ಟೇಬಲ್, ಮಂಚ, ಎ.ಸಿ., ಟಿ.ವಿ., ಪ್ರಿಡ್ಜ್, ವಾಶಿಂಗ್‍ಮಿಶನ್ ಮೊದಲಾದ ವಸ್ತುಗಳಿದ್ದು ರೂ.95 ಸಾವಿರಕ್ಕೆ ನೀಡುವುದಾಗಿ ಹೇಳುತ್ತಾನೆ. ಜತೆಗೆ ಸಾಮಗ್ರಿಗಳ ಪೋಟೋ ಅನ್ನು ಕಳುಹಿಸಿದ್ದರು. ಇದನ್ನು ನಂಬಿದ ಭರತ್‍ರಾಜ್ ಅವರು ಖರೀದಿಸಲು ಸಮ್ಮತಿ ಸೂಚಿಸುತ್ತಾರೆ.
ಸಂತೋಷ್ ಎಂದು ಪರಿಚಯಿಸಿದ ವ್ಯಕ್ತಿ ರೂ.95 ಸಾವಿರ ಕಳುಹಿಸುವಂತೆ ಕರೆ ಮಾಡುತ್ತಾರೆ. ಆದರೆ, ಅಷ್ಟು ಹಣ ಇಲ್ಲ ಎಂದು ರೂ.10 ಸಾವಿರ ಕಳುಹಿಸುವೆ ಎಂದು ಭರತ್ ಹೇಳುತ್ತಾರೆ. ಫೋನ್ ಪೇ ಅಥವಾ ಗೂಗಲ್ ಪೇ ಯಾವುದು ಎಂದು ಸಂತೋಷ್ ವಿಚಾರಿಸಿದ್ದಾನೆ. ಆಗ ಭರತ್ ಫೋನ್ ಪೇ ಎಂದಿದ್ದಾರೆ. ತತ್‍ಕ್ಷಣ ಅತ್ತ ಕಡೆಯಿಂದ ಹಣ ಕಳುಹಿಸಬೇಕಾದ ದೂರವಾಣಿ ಸಂಖ್ಯೆಯನ್ನು ಆತ ಹೇಳುತ್ತಾನೆ. ಈ ನಂಬರ್‍ನಲ್ಲಿ ಬಾಬುಲಾಲ್ ಎಂಬ ಹೆಸರು ಡಿಸ್‍ಪ್ಲೇ ಆಗುತ್ತಿದ್ದು, ಭರತ್‍ರಾಜ್ ಅವರು ತನ್ನ ಅಕೌಂಟ್‍ನಲ್ಲಿ ಹಣ ಇಲ್ಲದ ಕಾರಣ ತಂದೆ ಬಾಲಕೃಷ್ಣ ಅವರ ಬ್ಯಾಂಕ್ ಖಾತೆಯಿಂದ ರೂ.10 ಸಾವಿರ ವರ್ಗ ಮಾಡುತ್ತಾರೆ. ಹಣ ಸಂದಾಯದ ಬಳಿಕ ಸ್ಟ್ರೀನ್ ಶಾಟ್ ಕಳುಹಿಸುವಂತೆ ಆತ ಹೇಳಿದಂತೆ ಎಲ್ಲ ಪ್ರಕ್ರಿಯೆ ಆಗಿ ಬಾಬು ಲಾಲ್ ಹೆಸರಿಗೆ ಹಣ ಸಂದಾಯ ಆಗಿರುವುದನ್ನು ಖಚಿತಪಡಿಸಿದ ಬಳಿಕ ಸಂತೋಷ್ ಕರೆ ಕಟ್ ಮಾಡುತ್ತಾರೆ.
ಇದಾದ ಹತ್ತೇ ನಿಮಿಷದಲ್ಲಿ ಸಿಆರ್‍ಪಿ ಇಲಾಖೆಯ ವಾಹನದಲ್ಲೇ ಗೃಹೋಪಯೋಗಿ ವಸ್ತುಗಳನ್ನು ಕಳುಹಿಸಲಾಗುತ್ತಿದೆ ಎಂದು ಸಂತೋಷ್ ಫೋಟೋ ಸಹಿತ ಸಂದೇಶ ಕಳುಹಿಸುತ್ತಾನೆ. ಫೋಟೋ ನೋಡುವಾಗ ಭರತ್‍ಗೆ ಅನುಮಾನ ಮೂಡುತ್ತದೆ. ಇದಾದ ಕೆಲವು ನಿಮಿಷಗಳಲ್ಲಿ ಪದೇ ಪದೇ ಕರೆ ಮಾಡಿ ಉಳಿದ ಹಣ ಯಾವಾಗ ಹಾಕುತ್ತೀರಿ ಎಂದು ಆತ ಪ್ರಶ್ನೆ ಮಾಡುತ್ತಾನೆ. ಪೇಟೆಗೆ ಹೋಗಿ ಹಾಕುವೆ ಎಂದಾಗ ಮತ್ತೆ ಮತ್ತೆ ಕರೆ ಮಾಡುತ್ತಿರುತ್ತಾನೆ. ಈ ವೇಳೆ ಇದು ಮೋಸದ ಜಾಲ ಎನ್ನುವ ಸಂಶಯ ಭರತ್‍ರಾಜ್ ಅವರಿಗೆ ಮೂಡಿದೆ.
ತನಗೆ ಮೆಸೇಂಜರ್‍ನಲ್ಲಿ ಸಂದೇಶ ಕಳುಹಿಸಿದ ರಾಧಾಕೃಷ್ಣ ಖಾತೆಯನ್ನು ಪರಿಶೀಲಿಸಿ ಬಳಿಕ ತನ್ನ ಸಂಬಂಧಿಕರ ಮೂಲಕ ಭರತ್‍ರಾಜ್ ಅವರು ರಾಧಾಕೃಷ್ಣ ಅವರ ನಂಬರ್ ಪಡೆಯುತ್ತಾರೆ. ರಾಧಾಕೃಷ್ಣ ಅವರಿಗೆ ಕರೆ ಮಾಡಿದ ಸಂದರ್ಭ ಇದು ನಕಲಿ ಫೇಸ್ಬುಕ್ ಖಾತೆ ಅನ್ನುವ ಅಂಶ ತಿಳಿದು ಬರುತ್ತದೆ. ಕೆಲವು ದಿನಗಳಿಂದ ತನ್ನ ಹೆಸರಿನಲ್ಲಿ ನಕಲಿ ಸೃಷ್ಟಿಯಾಗಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿ ದೂರು ನೀಡಿರುವ ಬಗ್ಗೆ ಅವರು ಹೇಳುತ್ತಾರೆ. ಹೀಗಾಗಿ ಭರತ್‍ರಾಜ್ ತಾನು ಮೋಸ ಹೋದದ್ದು ಅರಿವಿಗೆ ಬಂದು ಸೈಬರ್ ಕ್ರೈಂನಲ್ಲಿ ದೂರು ನೀಡಿದ್ದಾರೆ.