ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ನೂತನ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕ ಮಾಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗ ಸೈಯದ್ ಉಲ್ ಹುಸೇನಿರನ್ನು ವಕ್ಫ್ ಬೋರ್ಡ್ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ರಾಜ್ಯದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಜಟಾಪಟಿಗೆ ಕಾರಣವಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಆಪ್ತ ಅನ್ವರ್ ಪಾಷಾ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಭಾರಿ ಪ್ರಯತ್ನ ನಡೆಸಿದ್ದರು. ಆದರೆ ಪಕ್ಷದ ಹೈಕಮಾಂಡ್ ಜಮೀರ್ ಅವರ ಆಪ್ತನ ನೇಮಕಕ್ಕೆ ಒಪ್ಪಿಗೆ ನೀಡಲಿಲ್ಲ.
ಬದಲಾಗಿ ಹೈಕಮಾಂಡ್ ಸೈಯದ್ ಶಾ ಅಲಿ ಉಲ್ ಹುಸೇನಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಇದರಿಂದ ಕೆಂಡಾಮಂಡಲರಾದ ಸಚಿವ ಜಮೀರ್ ಅಹ್ಮದ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡೂ ಬಣಗಳ ಜೊತೆ ಸಂಧಾನ ನಡೆಸಿ, ಜಮೀರ್ ಆಪ್ತ ಅನ್ವರ್ ಪಾಷಾ ಮತ್ತು ಹೈಕಮಾಂಡ್ ಆಯ್ಕೆಯ ಸೈಯದ್ ಶಾ ಅಲಿ ಉಲ್ ಹುಸೇನಿ ಅವರಿಗೆ ತಲಾ ಎರಡೂವರೆ ವರ್ಷಗಳ ಕಾಲ ಅಧಿಕಾರ ಹಂಚಿಕೆ ಮಾಡುವಂತೆ ಸೂಚಿಸಿದರು.
ಈ ಪ್ರಸ್ತಾಪವನ್ನು ಡಿ.ಕೆ. ಶಿವಕುಮಾರ್ ಮತ್ತು ನಾಸೀರ್ ಹುಸೇನ್ ತಿರಸ್ಕರಿಸಿದರು. ಕೊನೆಗೆ ಹೈಕಮಾಂಡ್ ಸೂಚಿಸಿದಂತೆ ಸೈಯದ್ ಶಾ ಅಲಿ ಉಲ್ ಹುಸೇನಿ ಅವರೇ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.