ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆಯ ಪಾಕಿಸ್ತಾನದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಇಡೀ ದೇಶ ನಲುಗಿ ಹೋಗಿದೆ. ಸಾವಿನ ಸಂಖ್ಯೆಯೂ ವ್ಯಾಪಕವಾಗಿ ಏರಿಕೆ ಕಾಣುತ್ತಿರುವುದರಿಂದ ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪಾಕಿಸ್ತಾನ ಸರ್ಕಾರಕ್ಕೆ 1.17 ಶತಕೋಟಿ ಡಾಲರ್ ನಿಧಿ ಬಿಡುಗಡೆಗೆ ಒಪ್ಪಿಕೊಂಡಿದೆ.
ಈ ಹಣ ಮೂಲತಃ 2019ರಿಂದ ತಡೆಹಿಡಿಯಲಾದ ಬೇಲ್‌ಔಟ್ ಸಾಲದ ಭಾಗವಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸರ್ಕಾರದ ಸಮಯ ಇಂಧನ ಸಬ್ಸಿಡಿಗಳನ್ನು ಕಡಿತಗೊಳಿಸುವಂತೆ ಕೇಳಿಕೊಂಡಿದ್ದ ಐಎಂಎಫ್‌ನ ಬೇಡಿಕೆಯನ್ನು ಪೂರೈಸದ್ದಕ್ಕೆ ಈ ಪಾವತಿಯನ್ನು ತಡೆಹಿಡಿಯಲಾಗಿತ್ತು. ಇದೀಗ ಐಎಂಎಫ್ ತಡೆಹಿಡಿಯಲಾದ ಪಾವತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿಕೊಂಡಿದೆ. ಅದರೊಂದಿಗೆ ಹೆಚ್ಚುವರಿ 1 ಶತಕೋಟಿ ಡಾಲರ್ ನೀಡಲು ಐಎಂಎಫ್ ಮುಂದಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ.
ಭಾರೀ ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಸುಮಾರು 1,100 ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಈ ಹಿನ್ನೆಲೆ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪ್ರಧಾನಿ ಶೆಹಬಾಜ್ ಷರೀಫ್ ಅಂತಾರಾಷ್ಟ್ರೀಯ ನೆರವಿಗೆ ಬೇಡಿಕೆಯಿಟ್ಟಿದ್ದರು.
ಪಾಕಿಸ್ತಾನದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಹಾಗೂ ಎಲ್ಲಾ ನದಿಗಳ ಪ್ರವಾಹದಿಂದಾಗಿ ಈವರೆಗೆ 1,100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 33 ದಶಲಕ್ಷ ಮಂದಿ ಪ್ರವಾಹದಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಬಹಳಷ್ಟು ಜನರು ನಾಪತ್ತೆಯಾಗಿದ್ದಾರೆ. ಜೂನ್ 14ರಿಂದ ಈವರೆಗಿನ ಲೆಕ್ಕ ಇದಾಗಿದೆ ಎಂದು ಪಾಕಿಸ್ತಾನದ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಎಲ್ಲಾ ಸಾವು, ನೋವುಗಳೂ ಮಳೆ ಹಾಗೂ ಪ್ರವಾಹದಿಂದಲೇ ಸಂಭವಿಸಿವೆ ಎಂದು ಪ್ರಾಧಿಕಾರ ಸ್ಪಷ್ಟನೆ ನೀಡಿದೆ.