June 7, 2026
Sunday, June 7, 2026
spot_img

ಬಿಡದಿ ಟೌನ್‌ಶಿಪ್ ವಿರೋಧಿಸಿ ಇಂದಿನಿಂದಲೇ ಹೋರಾಟ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣ ಮಾಡಲು ಹೊರಟಿರುವ ಬೃಹತ್ ಟೌನ್‌ಶಿಪ್ ಯೋಜನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಇಂದಿನಿಂದಲೇ ಹೋರಾಟ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಸರ್ಕಾರ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿದೆ. ಈ ರೈತರು ನಿಮಗಾಗಿ ದೊಡ್ಡ ಮಟ್ಟದ ಹೈನುಗಾರಿಕೆ, ತೋಟಗಾರಿಕೆ ನಡೆಸುತ್ತಾರೆ. ನಿತ್ಯವೂ ಡೇರಿಗೆ ಹಾಲನ್ನು ನೀಡುತ್ತಿದ್ದಾರೆ. ಇಂತಹ ರೈತರ ಹಸಿರು ಕ್ರಾಂತಿಯ ಈ ಫಲವತ್ತಾದ ಭೂಮಿಯನ್ನು ಕಿತ್ತುಕೊಂಡರೆ ಸಾವಿರಾರು ರೈತ ಕುಟುಂಬಗಳು ಬೀದಿಪಾಲಾಗುತ್ತವೆ ಎಂದು ಎಂದು ತಿಳಿಸಿದರು.

ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಸರ್ಕಾರ ಕೈಗಾರಿಕಾ ಉದ್ದೇಶಗಳಿಗಾಗಿ ಸಾವಿರಾರು ಎಕರೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಇಲ್ಲಿ ಟೌನ್‌ಶಿಪ್ ಯೋಜನೆ ನಡೆಸಿದರೆ, ಕೃಷಿ ಭೂಮಿಯ ಸುತ್ತಲೂ ರೈತರು ಬೆಳೆಸಿರುವ ಲಕ್ಷಾಂತರ ಮರ-ಗಿಡಗಳು ನಾಶವಾಗಲಿದ್ದು, ಪರಿಸರಕ್ಕೆ ಅಪಾರ ಹಾನಿ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು ಜವಾಬ್ದಾರಿಯನ್ನು ಈಗ ಒಬ್ಬರು ವಹಿಸಿಕೊಂಡಿದ್ದಾರೆ. ಅವರು ಟೌನ್‌ಶಿಪ್ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಹೊಡೆಯಲು ಹೊರಟಿದ್ದಾರೆ. ಆ ಬೆಂಗಳೂರು ಹೊಣೆಗಾರಿಕೆ ಹೊತ್ತಿರುವ ವ್ಯಕ್ತಿಯ ಒತ್ತಡಕ್ಕೆ ಮಣಿದು ಜನಸಾಮಾನ್ಯರಿಗೆ ಅನ್ಯಾಯ ಮಾಡಬೇಡಿ. ಬಿಡದಿ ರೈತರು ಕಣ್ಣೀರು ಹಾಕುತ್ತಿದ್ದಾರೆ ಎಂದು ದೇವೇಗೌಡರು ಹೇಳಿದರು.

ಇವತ್ತಿನಿಂದ ನನ್ನ ಹೋರಾಟ ಆರಂಭವಾಗಿದೆ. ಬೆಂಗಳೂರು ಸುತ್ತಮುತ್ತ ಬಡವರ ಜಮೀನನ್ನು ಕಿತ್ತುಕೊಳ್ಳುವ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ. ಬಿಡಿಎ ಸೇರಿದಂತೆ ಎಲ್ಲೆಲ್ಲಿ ಅಕ್ರಮ ನಡೆದಿದೆಯೋ ಅಲ್ಲೆಲ್ಲ ನಾನು ಹೋರಾಟ ನಡೆಸುತ್ತೇನೆ ಎಂದು ಗುಡುಗಿದರು.

ಇದೇ ವೇಳೆ ಬಿಡದಿಯ ರೈತರ ಪರಿಸ್ಥಿತಿಯನ್ನು ನೀವೇ ಖುದ್ದಾಗಿ ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ ದೇವೇಗೌಡರು, ನೀವು ಬನ್ನಿ. ಸ್ಥಳಕ್ಕೆ ಭೇಟಿ ನೀಡೋಣ. ಕನಕಪುರದಲ್ಲಿ ಎಷ್ಟು ಜಮೀನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ಯಾರ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !