ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ವಿರುದ್ಧದ ಹೋರಾಟ ‘ಎರಡನೇ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ.
ಎಐಸಿಸಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮೋದಿ ಸರ್ಕಾರವನ್ನು ವಸಾಹತುಶಾಹಿ ಆಡಳಿತದೊಂದಿಗೆ ಹೋಲಿಸಿ, ಈ ಹಿಂದೆ ಬ್ರಿಟಿಷರು ಮಾಡಿದಂತೆ ಈ ಸರ್ಕಾರವೂ ಕೋಮುವಾದವನ್ನು ಬಳಸಿಕೊಳ್ಳುತ್ತಿದೆ. ಆದರೆ ಇದರ ವಿರುದ್ಧ ಕಾಂಗ್ರೆಸ್ ಹೋರಾಡಿ ಗೆಲ್ಲುತ್ತದೆ ಎಂದು ಪ್ರತಿಜ್ಞೆ ಮಾಡಿದರು.
ಬಿಜೆಪಿಯ ಹನ್ನೊಂದು ವರ್ಷಗಳ ಆಡಳಿತದಲ್ಲಿ ಸಂವಿಧಾನದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ವಿರೋಧ ಪಕ್ಷಗಳ ಧ್ವನಿ ಹತ್ತಿಕ್ಕಲಾಗುತ್ತಿದೆ. ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗ(ಇಸಿ) ಸೇರಿದಂತೆ ಯಾವುದೇ ಸಂಸ್ಥೆಯೂ ಪ್ರಧಾನಿಯಡಿ ಸುರಕ್ಷಿತವಾಗಿಲ್ಲ. ಇದೆಲ್ಲವೂ ವಂಚನೆಯಾಗಿದೆ. ಅವರು ಪುರಾವೆಗಳನ್ನು ಕೇಳುತ್ತಿದ್ದಾರೆ. ಆದರೆ ತಮ ವಿರೋಧಿಗಳನ್ನು ಸೋಲಿಸಲು ಈ ಸಂಪೂರ್ಣ ತಂತ್ರವನ್ನು ರಚಿಸಲಾಗಿದೆ ಎಂದು ನಾನು ಹೇಳುತ್ತೇನೆ ಎಂದರು.