ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ಎಬಿವಿಪಿ ನಡೆಸಿದ ಪ್ರತಿಭಟನೆಯು ಅಂತಿಮವಾಗಿ ಹಿಂಸಾಚಾರಕ್ಕೆ ತಿರುಗಿದ ಘಟನೆ ಪೀಪಲ್ ಟ್ರೀ ಕಾಲೇಜು ಮುಂಭಾಗ ನಡೆದಿದೆ. ಪೊಲೀಸರು ಮತ್ತು ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಕಾಲೇಜು ಆವರಣ ರಣಾಂಗಣದಂತಾಗಿತ್ತು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮತ್ತು ಡ್ರಗ್ಸ್ ವಿತರಣೆಯಾಗುತ್ತಿದೆ ಎಂದು ಆರೋಪಿಸಿ ಎಬಿವಿಪಿ ಸಂಘಟನೆಯ ಸುಮಾರು 30ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಶಾಲಾ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯ ನಡುವೆ ಕಾರ್ಯಕರ್ತರು ಕಾಲೇಜಿನ ಒಳಗೆ ನುಗ್ಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ, ಜನಸಂದಣಿಯನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಕಾರ್ಯಕರ್ತರು ಕಾಲೇಜು ಆವರಣಕ್ಕೆ ನುಗ್ಗಿ ಕಿಟಕಿ ಗಾಜುಗಳು, ಹೂಕುಂಡಗಳು ಸೇರಿದಂತೆ ವಿವಿಧ ವಸ್ತುಗಳನ್ನು ಧ್ವಂಸಗೊಳಿಸಿದರು. ಸದ್ಯ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.



