Wednesday, February 28, 2024

ಬಿಜೆಪಿಯ ಜೊತೆ ಫೈಟ್‌ ಮಾಡಿ..ರಾಮನ ಜೊತೆ ಅಲ್ಲ: ಸನಾತನ ಧರ್ಮದ ವಿರೋಧ ಸೋಲಿಗೆ ಕಾರಣ ಎಂದ ಕಾಂಗ್ರೆಸ್‌ ನಾಯಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಛತ್ತೀಸ್‌ಗಢದಲ್ಲಿ ಬಿಜೆಪಿ ಸುಲಭವಾಗಿ ಸರ್ಕಾರ ರಚನೆ ಮಾಡುತ್ತಾ ಹೆಜ್ಜೆ ಇಡುತ್ತಿದ್ದು, ಕಾಂಗ್ರೆಸ್‌ ಪಕ್ಷ ತೆಲಂಗಾಣದಲ್ಲಿ ಅಧಿಕಾರಕ್ಕೆ ಏರುವುದು ನಿಶ್ಚಿತವಾಗಿದೆ.

ಇತ್ತ ಕಾಂಗ್ರೆಸ್‌ ಹೀನಾಯ ಸೋಲಿನ ಬೆನ್ನಲ್ಲಿಯೇ ಸೋಲಿನ ಪರಾಮರ್ಶೆ ಆರಂಭವಾಗಿದ್ದು, ಸ್ವತಃ ಕಾಂಗ್ರೆಸ್‌ನಲ್ಲಿಯೇ ಪಕ್ಷದ ಕೆಲವೊಂದು ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ದೇಶದಲ್ಲಿ ಸನಾತನ ಧರ್ಮವನ್ನು ಸ್ವತಃ ಕಾಂಗ್ರೆಸ್‌ ವಿರೋಧಿಸಲು ನಿಂತಿದ್ದೇ ಈ ಸೋಲಿಗೆ ಕಾರಣ ಎಂದು ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ಮಾತನಾಡುವ ವೇಳೆ, ಮಹಾತ್ಮಾ ಗಾಂಧಿ ತೋರಿಸಿಕೊಟ್ಟಿದ್ದ ದಾರಿಯಲ್ಲಿ ನಡೆಯಬೇಕಿದ್ದ ಕಾಂಗ್ರೆಸ್‌ ಪಕ್ಷ, ಮಾರ್ಕ್ಸ್‌ ದಾರಿಯಲ್ಲಿ ಸಾಗಿದಾಗ ಇಂಥ ಫಲಿತಾಂಶಗಳು ಸಿಗುತ್ತವೆ ಎಂಧು ಆಚಾರ್ಯ ಪ್ರಮೋದ್ ಎಚ್ಚರಿಸಿದ್ದಾರೆ.

ಒಂದು ವಿಚಾರವನ್ನು ಎಲ್ಲಾ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಸನಾತನ ಧರ್ಮವನ್ನು ವಿರೋಧಿಸಿ ಭಾರತದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡುತ್ತೇನೆ ಎನ್ನುವ ವ್ಯಕ್ತಿಗಳ ಪರವಾಗಿ ಕಾಂಗ್ರೆಸ್‌ ನಿಂತಿತ್ತು. ಮಹಾತ್ಮಾ ಗಾಂಧಿ ಅವರ ತತ್ವ ಆದರ್ಶಗಳಲ್ಲಿ ಸಾಗುವ ಪಕ್ಷದ ರೀತಿ ಇದಾಗಿರಲಿಲ್ಲ. ದೇಶದಲ್ಲಿ ನಿಜವಾದ ಸೆಕ್ಯುಲರ್‌ ಅಂತಾ ಇದ್ದರೆ ಅದು ಮಹಾತ್ಮ ಗಾಂಧೀಜಿ ಮಾತ್ರ ಎಂದಿದ್ದಾರೆ.

ಈ ವರ್ಷ ರಾಜಸ್ಥಾನದ ಚುನಾವಣೆಯಲ್ಲಿ ತಮ್ಮ ಪ್ರಚಾರ ಸಮಿತಿಯಿಂದ ಕೈಬಿಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಆಚಾರ್ಯ ಪ್ರಮೋದ್‌, ಕಳೆದ ಬಾರಿ ಕಾಂಗ್ರೆಸ್‌ ನನ್ನನ್ನು ಸ್ಟಾರ್‌ ಕ್ಯಾಂಪೇನರ್‌ ಲಿಸ್ಟ್‌ನಲ್ಲಿ ಇರಿಸಿದ್ದಾಗ ಇಲ್ಲಿ ಸರ್ಕಾರ ರಚನೆ ಮಾಡಿದ್ದೆವು. ಆದರೆ, ಈ ಬಾರಿ ನಾನು ಈ ಪಟ್ಟಿಯಲ್ಲೇ ಇದ್ದಿರಲಿಲ್ಲ. ಇದರಿಂದಾಗಿ ಮೂರೂ ರಾಜ್ಯಗಳಲ್ಲಿ ಸೋಲು ಕಂಡಿದೆ. ಒಬ್ಬ ಸಂತನನ್ನು ಸ್ಟಾರ್‌ ಕ್ಯಾಂಪೇನರ್‌ ಮಾಡಿದ ಪಕ್ಷ ಕಾಂಗ್ರೆಸ್‌. ಆದರೆ, ಈ ಬಾರಿ ಕಾಂಗ್ರೆಸ್‌ ಆ ನಿರ್ಧಾರ ಮಾಡಿರಲಿಲ್ಲ. ಕಾಂಗ್ರೆಸ್‌ನಲ್ಲಿ ಕೆಲವೊಂದು ವ್ಯಕ್ತಿಗಳಿದ್ದಾರೆ. ಅವರಿಗೆ ರಾಮ ಹೆಸರನ್ನು ತೆಗೆದರೆ ಆಗೋದಿಲ್ಲ. ಸನಾತನ ಬಗ್ಗೆ ಮಾತನಾಡಬಾರದು ಅಂತಾರೆ. ಸನಾತನವನ್ನು ವಿರೋಧಿಸಿದವನ್ನು ದೊಡ್ಡ ನಾಯಕ ಎನ್ನುವಂತೆ ಬಿಂಬಿಸುತ್ತಾರೆ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಶ್ರಮ ಜೀವಿ. ಚುನಾವಣೆಗಾಗಿ ಬಹಳ ಕಷ್ಟಪಟ್ಟಿದ್ದಾರೆ. ಆದರೆ, ಜನರ ಆಶೀರ್ವಾದ ಸಿಕ್ಕಿಲ್ಲವಷ್ಟೇ ಎಂದಿದ್ದಾರೆ. ತಮ್ಮ ಕೈಯಿಂದ ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಿದ್ದಾರೆ. ಭಾರತ್‌ ಜೋಡೋ ಯಾತ್ರೆಯಲ್ಲಿ ಸಾವಿರಾರು ಕಿಲೋಮೀಟರ್‌ ನಡೆದಿದ್ದಾರೆ. ಈ ಸೋಲನ್ನು ಅವರ ತಲೆಗೆ ಕಟ್ಟುವುದು ಸರಿಯಲ್ಲ. ನಾವು ಶ್ರಮಪಡಬಹುದಷ್ಟೇ, ಆದರೆ, ಎಲ್ಲವನ್ನೂ ನೀಡುವವನು ದೇವರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇವರು. ಇಂದು ಜನರು ರಾಹುಲ್‌ ಗಾಂಧಿಯ ಸೇವೆ ಹಾಗೂ ಪ್ರಾರ್ಥನೆಯನ್ನು ತಿರಸ್ಕರಿಸಿದ್ದಾರೆ ಎಂದರು.

ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ನೀವು ಬಿಜೆಪಿಯ ಜೊತೆ ಫೈಟ್‌ ಮಾಡಿ. ಭಗವಾನ್‌ ರಾಮನ ಜೊತೆ ಮಾಡಲು ಹೋಗಬೇಡಿ. ಇನ್ನು ಪ್ರಧಾನಿ ವಿಚಾರದಲ್ಲೂ ಮಾತನಾಡುವಾಗ ಎಚ್ಚರಿಕೆಯಲ್ಲಿರಬೇಕು. ಅವರು ದೇಶದ ಪ್ರಧಾನಿ, ಬಿಜೆಪಿ ಪಕ್ಷದ ಪ್ರಧಾನಿಯಲ್ಲ. ಪ್ರಧಾನಿಗೆ ಅಗೌರವ ಮಾಡುವಂಥ ಮಾತನಾಡಬಾರದು. ಪ್ರಧಾನಿ ಅವಮಾನ ಮಾಡೋದನ್ನ ಜನರು ಸಹಿಸೋದಿಲ್ಲ. ಅದು ಯಾರೇ ಪಿಎಂ ಆಗಿರಲಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!