ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನೆರೆಯ ರಾಷ್ಟ್ರಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಎಲ್ಲರಿಗೂ ತಿದಿರುವ ವಿಚಾರ. ಈಗಾಗಲೇ ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಅವರ ಸರ್ಕಾರ ಪತನವಾಗಿದೆ.
ಇದೀಗ ಅದೇ ಮಾದರಿಯ ಹೋರಾಟ ಪಾಕಿಸ್ತಾನದಲ್ಲೂ ನಡೆಯುತ್ತಿದೆ. ಆಡಳಿತಾರೂಢ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಬೃಹತ್ ಹೋರಾಟ ನಡೆಸುತ್ತಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿಕೊಂಡು ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಇಡಲಾಗಿದೆ. ಅವರ ವಿರುದ್ಧ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ. ವಿಪಕ್ಷಗಳ ಧ್ವನಿ ಹತ್ತಿಕ್ಕಲಾಗುತ್ತಿದೆ. ಪ್ರಧಾನಿ ಷರೀಫ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪಿಟಿಐ ಕಾರ್ಯಕರ್ತರು ಕೆಲ ದಿನಗಳಿಂದ ಚಳವಳಿ ಆರಂಭಿಸಿದ್ದಾರೆ.
ಎರಡು ದಿನಗಳ ಹಿಂದೆ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು, ನಾಯಕರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಬಂಧಿಸಲಾಗಿದೆ. ಇದರಿಂದ ಹೋರಾಟ ಮತ್ತಷ್ಟು ಕಾವು ಪಡೆದಿದೆ.
ಸಾರ್ವಜನಿಕ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಇಸ್ಲಾಮಾಬಾದ್ನಲ್ಲಿ ತನ್ನ ನಾಯಕರ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆ, ಬಂಧನವನ್ನು ವಿರೋಧ ಪಕ್ಷವು ಬಲವಾಗಿ ಖಂಡಿಸಿತು. ಪಿಟಿಐ ಪಕ್ಷದ ಹಿರಿಯ ನಾಯಕ ಅಸದ್ ಕೈಸರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಪಕ್ಷದ ನಾಯಕರು ಕೋರ್ಟ್ನಲ್ಲಿ ಕಾನೂನು ಹೋರಾಟ ಮುಂದುವರೆಸುವುದರ ಜೊತೆಗೆ ಬೀದಿಗಿಳಿದು ಹೋರಾಡುತ್ತೇವೆ. ಬಂಧನಕ್ಕೊಳಗಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇತರ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.