ಹೊಸದಿಗಂತ ವರದಿ ಚಿತ್ರದುರ್ಗ:
ಕುಶಾಲನಗರದ ಬಿಜೆಪಿ ಕಾರ್ಯಕರ್ತ ವಿನಯ್ ಅವರ ಆತ್ಮಹತ್ಯೆಗೆ ಕಾರಣವಾದ ಇಬ್ಬರು ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಮಾಜಿ ಸಚಿವ ಮಹೇಶ್ ಆಗ್ರಹಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೃತ ವಿನಯ್ ತನ್ನ ಡೆತ್ ನೋಟ್‌ನಲ್ಲಿ ಇಬ್ಬರು ಶಾಸಕರಾದ ಮಂಥರ್ ಗೌಡ ಮತ್ತು ಪೊನ್ನಣ್ಣ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂಬುದು ಮೃತ ವಿನಯ್ ಕುಟುಂಬದವರ ಆಗ್ರಹವಾಗಿದೆ. ಇದಕ್ಕೆ ಬಿಜೆಪಿ ಧ್ವನಿಗೂಡಿಸಿದೆ. ಆದರೆ ವಿರೋಧ ಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ವಿರೋಧ ಪಕ್ಷದ ಧ್ವನಿ ಜನಸಾಮಾನ್ಯರ ಧ್ವನಿ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಜನರ ಧ್ವನಿಗೆ ವಿರೋಧ ಪಕ್ಷದವರಾಗಿ ನಾವು ಧ್ವನಿಗೂಡಿಸುತ್ತಿದ್ದೇವೆ. ಆಡಳಿತ ಪಕ್ಷಕ್ಕೆ ಸಂವಿಧಾನ, ಕಾನೂನಿನ ಬಗ್ಗೆ ಗೌರವ ಇದ್ದಲ್ಲಿ ಮೃತನ ಕುಟುಂಬದವರ ಆಗ್ರಹದ ಪ್ರಕಾರ ಆರೋಪಿತರ ವಿರುದ್ಧ ಎಫ್‌ಐಆರ್ ಮಾಡಿ. ಆರೋಪಿತರು ಎಷ್ಟೇ ದೊಡ್ಡವರಾದರೂ ಅವರನ್ನು ಬಂಧನಕ್ಕೊಳಪಡಿಸಿ. ಅದನ್ನು ಬಿಟ್ಟು ಉಡಾಫೆಯಿಂದ ಮಾತನಾಡುವುದು ಸರಿಯಲ್ಲ ಎಂದರು.
ಒಳ ಮೀಸಲಾತಿ ಕೊಡಬೇಕೆಂದು ಇಡೀ ರಾಜ್ಯದ ಪರಿಶಿಷ್ಟ ಜಾತಿಯ 101 ಜಾತಿಗಳ ಆಗ್ರಹ. ಈ ಕುರಿತು ಸುಪ್ರಿಂ ಕೋರ್ಟ್ ಸಹ ಒಪ್ಪಿಗೆ ನೀಡಿದೆ. ಈ ಮೊದಲು ಕೇಂದ್ರ ಸರ್ಕಾರ ಒಳ ಮೀಸಲಾತಿ ಕುರಿತು ತೀರ್ಮಾನ ಕೈಗೊಳ್ಳಬೇಕೆಂದು ಹೇಳಲಾಗುತ್ತಿತ್ತು. ಆದರೆ ಸುಪ್ರಿಂ ಕೋರ್ಟ್ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವಂತೆ ತಿಳಿಸಿದೆ. ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆಸಲಾಗಿದ್ದು, ಹತ್ತಾರು ಜನ ಜೀವ ತೆತ್ತಿದ್ದಾರೆ. ಆದರೆ ಈಗ ವೈಜ್ಞಾನಿಕ ಅಂಕಿ ಅಂಶಗಳಿಲ್ಲ ಎಂದು ಸಬೂಬು ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.
ಒಳ ಮೀಸಲಾತಿ ಸಂವಿಧಾನದ ಆಶಯ. ಅದನ್ನು ಜಾರಿ ಮಾಡುವಂತೆ ಹೊರಾಟಗಾರರ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರಿಗೇಕೆ ಉರಿ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಒಳ ಮೀಸಲಾತಿ ಜಾರಿ ಮಾಡಲಿ. ಇನ್ನೆರಡು ತಿಂಗಳಲ್ಲಿ ಅಂಕಿ ಅಂಶಗಳನ್ನು ಸಂಗ್ರಹ ಮಾಡಿ ಒಳ ಮೀಸಲಾಗಿ ಜಾರಿ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.