ಹೊಸದಿಗಂತ ವರದಿ ಚಿತ್ರದುರ್ಗ:
ಭ್ರಷ್ಟ ಕಾಂಗ್ರೆಸ್ ಸರ್ಕಾರ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಗೌರವದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಅಧಿವೇಶನದಲ್ಲೇ ಹನಿಟ್ರ್ಯಾಪ್ ಕುರಿತು ಮೂರು ಜನ ಸಚಿವರೇ ಮಾತನಾಡಿದ್ದಾರೆ. 49 ಜನ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಸಿ.ಡಿ. ಇವೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಿ.ಡಿ., ಪೆನ್ ಡ್ರೈವ್‌ಗಳಿವೆ ಎನ್ನಲಾಗಿದೆ. ಇಂತಹ ದುರಾಡಳಿತವನ್ನು ಕಂಡರೂ ಕಾಣದಂತೆ ಕಣ್ಣುಮುಚ್ಚಿ ಅಧಿಕಾರ ನಡೆಸುವುದು ಸರಿಯಲ್ಲ. ಹಾಗಾಗಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಯಾರೋ ಕೆಲವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡಬೇಡಿ ಎಂದರೆ ನಾವು ಮಾತನಾಡದಿರಲು ಆಗುವುದಿಲ್ಲ. ಆರ್‌ಎಸ್‌ಎಸ್, ಬಿಜೆಪಿ, ಕಾಂಗ್ರೆಸ್ ಏನು ಕೆಲಸ ಮಾಡಿವೆ ಎಂಬ ಬಗ್ಗೆ ತಿಳಿಯಲೇಬೇಕು. ಒಳಮೀಸಲಾತಿ ಜಾರಿ ಮಾಡದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದೇನೆ. ಒಳ ಮೀಸಲಾತಿ ಜಾರಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಾಲಿಟರಿ ಜನರಲ್ ಹಾಗೂ ಅಧಿಕಾರಿಗಳ ಮೂಲಕ ಸುಪ್ರಿಂ ಕೋರ್ಟ್‌ಗೆ ಅಪಿಡವಿಟ್ ಹಾಕಿದ್ದಾರೆ ಎಂದು ತಿಳಿಸಿದರು.
ಅದರಂತೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಏಳು ಜನರ ಸಂವಿಧಾನಿಕ ಪೀಠ ಒಳಮೀಸಲಾತಿ ನೀಡುವಂತೆ ಆದೇಶ ಮಾಡಿದೆ. ಆದರೆ ಕರ್ನಾಟಕ ಸರ್ಕಾರ ಮಲತಾಯಿ ಧೋರಣೆ ತಳೆದಿದೆ. ರಾಜ್ಯ ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.