ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂಜನಗೂಡು ತಾಲ್ಲೂಕಿನ ಇಮ್ಮಾವು ಬಳಿಯ 160 ಎಕರೆ ಪ್ರದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಫಿಲಂ ಸಿಟಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಘೋಷಿಸಿದರು.
ದಸರಾ ಮಹೋತ್ಸವದ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ಹಿಂದಿನ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸಲು ತೀರ್ಮಾನಿಸಿ, ಇಮ್ಮಾವು ಗ್ರಾಮದಲ್ಲಿ 110 ಎಕರೆ ವಿಸ್ತೀರ್ಣದ ಭೂಮಿಯನ್ನು ಮೀಸಲಿರಿಸಲಾಗಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತಣೆಗೆ 50 ಎಕರೆ ಜಮೀನನ್ನು ಗುರುತಿಸಿ ನೀಡಲು ತೀರ್ಮಾನಿಸಲಾಗಿದೆ. ಮಾದರಿ ಸಿನಿಮಾ ನಗರಿಯನ್ನು ನಿರ್ಮಿಸುವುದು ಸರ್ಕಾರ ಹಾಗೂ ಚಿತ್ರರಂಗದವರ ಉದ್ದೇಶವಾಗಿದೆ ಎಂದು ಹೇಳಿದರು.
ಚಿತ್ರರಂಗದ ಬೆಳವಣಿಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಾ ಬಂದಿದೆ. ಕನ್ನಡ ಚಲನಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಚಿತ್ರರಂಗ ಬೆಳೆಯಬೇಕು. ಜನರು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿಯೇ ವೀಕ್ಷಿಸಬೇಕೆಂದು ತಿಳಿಸಿದರು