ಎಸೆಸ್ಸೆಲ್ಲಿ ಪರೀಕ್ಷಾ ಸೆಂಟರ್ ನಲ್ಲಿ ಫಿಲ್ಮ್ ಶೂಟಿಂಗ್: ಮಕ್ಕಳ ಭವಿಷ್ಯದಲ್ಲಿ ಆಡಳಿತ ಸಮಿತಿ ಚೆಲ್ಲಾಟಕ್ಕೆ ಪೋಷಕರು ಗರಂ

ಹೊಸದಿಗಂತ ವರದಿ ಪುತ್ತೂರು:

ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರವಾಗಿರುವ ಸೈಂಟ್ ವಿಕ್ಟರ್ಸ್ ಪ್ರೌಢ ಶಾಲೆಯ ಆವರಣದಲ್ಲಿ ಕನ್ನಡ ಸಿನಿಮಾವೊಂದಕ್ಕೆ ಶೂಟಿಂಗ್ ಗೆ ಅವಕಾಶ ಕೊಟ್ಟು ಶಾಲಾ ಆಡಳಿತ ಮಂಡಳಿ ಎಡವಟ್ಟು ಮಾಡಿಕೊಂಡಿದೆ.

ಇಲ್ಲಿ ನಟ ಆರ್ಯನ್ ಅಭಿನಯದ `ಲವ್ ಟು ಲಸ್ಸಿ’ ಎಂಬ ಕನ್ನಡ ಚಲನಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದಕ್ಕೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ಶಾಲಾ ಸಂಚಾಲಕರಿಂದ ಅನುಮತಿ ಪಡೆಯಲಾಗಿತ್ತು. ಆದ್ರೆ ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. ಜೊತೆಗೆ ಪರೀಕ್ಷಾ ಕೇಂದ್ರವಾಗಿದ್ದ ಪ್ರೌಢಶಾಲೆಯಲ್ಲಿ ಪರೀಕ್ಷಾ ದಿನದಂದೇ ಶೂಟಿಂಗ್ ಗೆ ಅವಕಾಶ ಮಾಡಿಕೊಟ್ಟದ್ದು ಎಷ್ಟು ಸರಿ ಎಂಬ ಪ್ರಶ್ನೆ ಪೋಷಕರಿಂದ ವ್ಯಕ್ತವಾಯಿತು.

ಇದಕ್ಕೆ ಕಾರಣ ಬೆಳಗ್ಗೆ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಾಲಾ ಗೇಟು ಬಳಿ ಬಂದಾಗ ಗೇಟು ತೆರೆಯಲು ಪೊಲೀಸರು, ಗೇಟ್ ಕೀಪರ್ ನಿರಾಕರಿಸಿದರು. ಇಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ಸ್ಥಿರವಿಲ್ಲದ ಉತ್ತರ ನೀಡಿದ್ರು. ಇದರಿಂದ ಕೆರಳಿದ ಪೋಷಕರು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಸೆಕ್ಷನ್ ಇರುವಾಗ ಯಾವ ರೀತಿ ಅವಕಾಶ ಮಾಡಿ ಕೊಟ್ಟಿದ್ದೀರಿ ಎಂದು ಶಾಲಾ ಆಡಳಿತ ಮಂಡಳಿಯವರನ್ನ ತರಾಟೆಗೆತ್ತಿಕೊಂಡರು.

ಇದಾದ ಬಳಿಕ ಸುದ್ದಿ ತಿಳಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಶೂಟಿಂಗ್ ಸ್ಪಾಟ್ ಗೆ ಬಂದು ಸಿನಿಮಾ ಚಿತ್ರೀಕರಣ ನಿಲ್ಲಿಸುವಂತೆ ಸೂಚಿಸಿದರು. ಜೊತೆಗೆ ಪೊಲೀಸರ ಮುಖಾಂತರ ಚಲನಚಿತ್ರ ತಂಡಕ್ಕೆ ಶಾಲಾ ಬಳಿಯಿಂದ ತೆರಳುವಂತೆ ಸೂಚನೆ ನೀಡಿದ್ರು. ಇಷ್ಟೆಲ್ಲ ಆದ್ರೂ ಪರೀಕ್ಷಾ ಕೇಂದ್ರದ 200 ಮೀಟರ್ ಒಳಗಡೆ, ಹಾಗೆಯೇ ಸೆಕ್ಷನ್ 144 ಜಾರಿ ಇರುವಾಗ ಶಾಲಾ ಆಡಳಿತ ಮಂಡಳಿಯ ಶೂಟಿಂಗ್ ಗೆ ಹೇಗೆ ಅವಕಾಶ ಕೊಟ್ಟಿದ್ದಾರೆ ಎಂಬುದು ಪೋಷಕರ ವಾದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!