September 12, 2026
Saturday, September 12, 2026
spot_img

ಕೊನೆಗೂ ದಿಶಾ ಸಾಲಿಯನ್‌ ಕೇಸ್‌ CBIಗೆ ಹಸ್ತಾಂತರ: ‘ಸತ್ಯಕ್ಕೆ ಜಯ ಸಿಗಲಿದೆ’ ಎಂದು ಕಣ್ಣೀರಿಟ್ಟ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ನಿಗೂಢ ಸಾವು ಸಂಭವಿಸಿ ಬರೋಬ್ಬರಿ ಆರು ವರ್ಷಗಳೇ ಕಳೆಯುತ್ತಾ ಬಂದರೂ ಆಕೆಯ ಕುಟುಂಬಕ್ಕೆ ಮಾತ್ರ ಇನ್ನೂ ನ್ಯಾಯ ಸಿಕ್ಕಿಲ್ಲ. ಆದರೆ ಈಗ ಈ ಕೇಸ್‌ನಲ್ಲಿ ದೊಡ್ಡ ತಿರುವು ಸಿಕ್ಕಿದೆ.

ದಿಶಾ ಸಾಲಿಯನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಖಡಕ್ ಆದೇಶ ನೀಡಿದೆ. ಇದರ ಬೆನ್ನಲ್ಲೇ ದಿಶಾ ತಂದೆ ತನಿಖಾಧಿಕಾರಿಗಳ ಮುಂದೆ ಕೆಲ ಸೆಲೆಬ್ರಿಟಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ.

ಕೆಲ ರಹಸ್ಯ ಬಿಚ್ಚಿಟ್ಟ ದಿಶಾ ತಂದೆ

ಈ ಬಗ್ಗೆ ಮಾತನಾಡಿದ ದಿಶಾ ತಂದೆ ಸತೀಶ್ ಸಾಲಿಯನ್ ಭಾವುಕರಾಗಿ ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ʼನನ್ನ ಮಗಳಿಗೆ ಏನಾಯಿತು ಎಂಬುದನ್ನು ನಾನು ಇದ್ದದ್ದನ್ನು ಇದ್ದ ಹಾಗೆ ತನಿಖಾಧಿಕಾರಿಗಳಿಗೆ ಹೇಳಿದ್ದೇನೆ. ಈ ಪ್ರಕರಣದಲ್ಲಿ ಕೇಳಿಬಂದಿದ್ದ ಆದಿತ್ಯ, ಸೂರಜ್ ಪಂಚೋಲಿ, ಡಿನೋ ಮೋರಿಯಾ ಮತ್ತು ಬಾಡಿಗಾರ್ಡ್‌ಗಳ ಹೆಸರು ಸೇರಿದಂತೆ ಎಲ್ಲಾ ವಿವರಗಳನ್ನು ಬರೆಸಿದ್ದೇನೆ. ಅಧಿಕಾರಿಗಳು ಎಲ್ಲವನ್ನೂ ನೋಟ್ ಮಾಡಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದಾರೆ. “ಸತ್ಯ ಎಲ್ಲಿದೆಯೋ ಅಲ್ಲಿ ದೇವರಿದ್ದಾನೆ, ಸತ್ಯವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ” ಎಂದು ಭಾವುಕರಾಗಿದ್ದಾರೆ.

ಪೊಲೀಸರ ನಡೆಗೆ ಹೈಕೋರ್ಟ್ ಅಸಮಾಧಾನ

ಈ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರಿದ್ದ ಪೀಠವು ಮುಂಬೈ ಪೊಲೀಸರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಗಳು ಕೊಲೆಯಾಗಿದ್ದಾಳೆ ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದರೂ, ಪೊಲೀಸರು ಕೇವಲ ‘ಆಕಸ್ಮಿಕ ಸಾವು’ ಎಂದು ಪ್ರಕರಣ ದಾಖಲಿಸಿಕೊಂಡಿದ್ದು ಏಕೆ? ಇಷ್ಟು ವರ್ಷಗಳಾದರೂ ಕುಟುಂಬಕ್ಕೆ ಮರಣೋತ್ತರ ಪರೀಕ್ಷೆಯ ವರದಿಯ ಪ್ರತಿಯನ್ನು ಏಕೆ ನೀಡಿಲ್ಲ? ಎಂದು ಕೋರ್ಟ್ ಗರಂ ಆಗಿದೆ. ಇದೇ ಕಾರಣಕ್ಕೆ ಈಗ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ:

ಸುಶಾಂತ್ ಸಿಂಗ್ ಕೇಸ್‌ಗೂ ಹೊಸ ಭರವಸೆ

ದಿಶಾ ಸಾಲಿಯನ್ ಕೇಸ್ ಸಿಬಿಐ ಕೈಗೆ ಹೋಗುತ್ತಿದ್ದಂತೆ ಇತ್ತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳಲ್ಲಿ ಹಾಗೂ ಅವರ ಕುಟುಂಬದಲ್ಲೂ ಹೊಸ ಭರವಸೆ ಮೂಡಿದೆ. ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, “ಸತ್ಯಕ್ಕೆ ತನ್ನದೇ ಆದ ಶಕ್ತಿಯಿದೆ. ಅದನ್ನು ಸ್ವಲ್ಪ ಸಮಯ ಹತ್ತಿಕ್ಕಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ. ದಿಶಾ ಸಾಲಿಯನ್ ಪ್ರಕರಣದಲ್ಲಿ ಸಿಬಿಐ ತನಿಖೆ ಆರಂಭವಾಗಿರುವುದು ಲಕ್ಷಾಂತರ ಸುಶಾಂತ್ ಅಭಿಮಾನಿಗಳಿಗೆ ದೊಡ್ಡ ಭರವಸೆ ನೀಡಿದೆ” ಎಂದು ಬರೆದುಕೊಂಡಿದ್ದಾರೆ.

2020 ರ ಜೂನ್ 8 ರಂದು ದಿಶಾ ಸಾಲಿಯನ್ ಮುಂಬೈನ ಫ್ಲಾಟ್‌ನಿಂದ ಬಿದ್ದು ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಜೂನ್ 14 ರಂದು ಸುಶಾಂತ್ ಕೂಡ ಸಾವನ್ನಪ್ಪಿದ್ದರು. ಈಗ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿರುವುದರಿಂದ ಇಬ್ಬರ ಸಾವಿನ ಹಿಂದಿರುವ ಅಸಲಿ ಸತ್ಯ ಹೊರಬರಲಿದೆಯೇ ಎಂದು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !