ಹೊಸದಿಗಂತ ಡಿಜಿಟಲ್ ಡೆಸ್ಕ್:
2009 ರಿಂದ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನದ ಮೂಲದ ಹಿಂದು ಮಹಿಳೆಯೊಬ್ಬರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗಿದೆ.
ಕೋಮಲ್ ಎಂಬ ಮಹಿಳೆ ಭಾರತೀಯ ಪೌರತ್ವ ಪಡೆದಿದ್ದು, 2019ರಲ್ಲಿ ಗುಜರಾತ್‌ನ ಯುವಕನನ್ನು ವಿವಾಹವಾಗಿ, ಓರ್ವ ಮಗಳಿದ್ದಾಳೆ.
ಕೋಮಲ್ ಅವರ ತಂದೆ ಕರಾಚಿಯಲ್ಲಿ ಉದ್ಯಮಿಯಾಗಿದ್ದರು. 14 ವರ್ಷಗಳ ಹಿಂದೆ ಸಾಕಷ್ಟು ಕಷ್ಟಗಳನ್ನು ಎದುರಿಸಿ ಇಡೀ ಕುಟುಂಬ ಪಾಕಿಸ್ತಾನವನ್ನು ತೊರೆದಿತ್ತು. ತಮ್ಮ ಎಲ್ಲ ಆಸ್ತಿಯನ್ನು ಪಾಕಿಸ್ತಾನದಲ್ಲಿ ಬಿಟ್ಟು ತಮ್ಮ ಮೂವರು ಹೆಣ್ಣುಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಕೋಮಲ್ ಅವರ ತಂದೆ ಅಮೃತಸರಕ್ಕೆ ಬಂದಿದ್ದರು. ಅಲ್ಲಿಂದ ಅಹಮದಾಬಾದ್‌ಗೆ ಬಂದ ಕುಟುಂಬವು ತಮ್ಮ ಹೊಸ ಜೀವನವನ್ನು ಕಟ್ಟಿಕೊಂಡಿತ್ತು.
ಇದೀಗ ಸುದೀರ್ಘ ಪ್ರಕ್ರಿಯೆಯ ನಂತರ ಕೋಮಲ್ ಅಂತಿಮವಾಗಿ ಭಾರತೀಯ ಪ್ರಜೆಯಾಗಿದ್ದಾರೆ. ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಅವರು ಸೆಪ್ಟೆಂಬರ್ 12ರಂದು ಕೋಮಲ್ ಅವರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರವನ್ನು ಔಪಚಾರಿಕವಾಗಿ ಹಸ್ತಾಂತರಿಸಿದ್ದಾರೆ ಎಂದು ಕೋಮಲ್ ಪತಿ ಹಿತೇಶ್ ಗಂಗ್ವಾನಿ ತಿಳಿಸಿದ್ದಾರೆ.
ಭಾರತಕ್ಕೆ ಬಂದ ನಂತರ ಕೋಮಲ್ ಮತ್ತು ಆಕೆಯ ಇಬ್ಬರು ಸಹೋದರಿಯರು 2011ರಲ್ಲಿ ಸರ್ದಾರ್ ನಗರದ ಶಾಲೆಯಲ್ಲಿ ಪ್ರವೇಶ ಪಡೆದಿದ್ದರು.ಬಳಿಕ ಹಿತೇಶ್ ಅದೇ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದರು. ಆಗ ಕೋಮಲ್ ಮತ್ತು ಆಕೆಯ ಸಹೋದರಿಯರನ್ನು ಶಾಲೆಯಲ್ಲಿ ‘ಪಾಕಿಸ್ತಾನಿ ಸಹೋದರಿಯರು’ ಎಂದೇ ಕರೆಯಲಾಗುತ್ತಿತ್ತು. ಆದರೆ, ಸಹೋದರಿಯರು ಎಂದು ಕರೆಯುವುದು ಹಿತೇಶ್ಗೆ ಇಷ್ಟವಾಗುತ್ತಿರಲಿಲ್ಲ. ಆದರೆ, ಹಿತೇಶ್ ಸಹೋದರಿಯೊಂದಿಗೆ ಕೋಮಲ್ ಒಂದೇ ತರಗತಿಯಲ್ಲಿ ಓದುತ್ತಿದ್ದರಿಂದ ಪಾಕಿಸ್ತಾನದಲ್ಲಿ ಅವರು ಎದುರಿಸಿದ ಕಷ್ಟಗಳ ಕಥೆಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು.
ಹೀಗೆ ಹಿತೇಶ್‌ನ ಸಹೋದರಿ ಬಂದು ಈತನಿಗೆ ಹೇಳುತ್ತಿದ್ದಳು. ನಂತರ ಹಿತೇಶ್ ಮತ್ತು ಕೋಮಲ್ ನಡುವೆ ಸ್ನೇಹ ಬೆಳೆದಿತ್ತು. ಇದರ ಬೆನ್ನಲ್ಲೇ ಇವರ ಸ್ನೇಹವು ಪ್ರೀತಿಗೆ ತಿರುಗಿತ್ತು. ಅಂತೆಯೇ, ಇಬ್ಬರು 2019ರಲ್ಲಿ ಮದುವೆಯಾಗಿದ್ದಾರೆ.
2022ರಲ್ಲಿ ಕೋಮಲ್ – ಹಿತೇಶ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಹಿತೇಶ್ ಜೊತೆ ವಿವಾಹದ ನಂತರ ಕೋಮಲ್ ಭಾರತೀಯ ಪ್ರಜೆಯಾಗಿದ್ದರು. ಆದರೆ, ಅಧಿಕ ಪೌರತ್ವ ಪ್ರಮಾಣಪತ್ರ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಕಾನೂನಾತ್ಮಕವಾಗಿ ಪೌರತ್ವ ದೃಢಪಟ್ಟಿದೆ.
ಇವರ ಜೊತೆಗೆ ಗುಜರಾತ್ ಸರ್ಕಾರವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದು ರಾಜ್ಯದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಜನರಿಗೆ ಭಾರತೀಯ ಪೌರತ್ವವನ್ನು ನೀಡುತ್ತಿದೆ. ಅಹಮದಾಬಾದ್ನಲ್ಲಿ ಇದುವರೆಗೆ 1100ಕ್ಕೂ ಹೆಚ್ಚು ಜನರಿಗೆ ಪೌರತ್ವ ಪ್ರಮಾಣಪತ್ರವನ್ನು ನೀಡಲಾಗಿದೆ.