ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಬೇಲೂರಿನಲ್ಲಿ ಪುಂಡಾನೆಗಳ ಸೆರೆ ಕಾರ್ಯಾಚರಣೆ ಭಾಗವಾಗಿ ಇಂದು ಮತ್ತೊಂದು ಕಾಡಾನೆ ಮಕ್ನಾನನ್ನು ಸೆರೆ ಹಿಡಿದು ಸ್ಥಳಾಂತರಿಸುವ ಮೂಲಕ ಅಂತ್ಯಗೊಂಡಿದೆ.
ಒಂದು ತಿಂಗಳ ಅಂತರದಲ್ಲಿ ನಾಲ್ವರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಮೂರು ಪುಂಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡಲು ಅನುಮತಿ ನೀಡಿತ್ತು. ಅದರಂತೆ ಏಳು ಸಾಕಾನೆಗಳು, ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆಯಸಿಬ್ಬಂದಿ, ವೈದ್ಯರುಗಳೊಂದಿಗೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಸೆರೆಹಿಡಿದ ಆನೆಗಳಲ್ಲಿ ಒಂದನ್ನು ಚಾಮರಾಜನಗರದ ಮಲೆಮಹದೇಶ್ವರ ಅರಣ್ಯಕ್ಕೆ ಬಿಟ್ಟರೆ, ಉಳಿದ ಎರಡು ಕಾಡಾನೆಗಳನ್ನು ಸಕ್ಕರೆಬೈಲು ಕ್ಯಾಂಪ್‍ಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಮುಂಜಾನೆಯೇ ಇಟಿಎಫ್ ಸಿಬ್ಬಂದಿ ಮಕ್ನಾ ಕಾಡಾನೆ ಇದ್ದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಸಕಲೇಶಪುರದ ಹೆಬ್ಬನಹಳ್ಳಿ ಬಳಿಯಿಂದ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿ, ಆನೆಗೆ ಅರವಳಿಕೆ ನೀಡಿ ಸೆರೆಹಿಡಿಯಲಾಯಿತು. ಸತತ ಮೂರು ಗಂಟೆಗಳ ಕಾಲ ಶ್ರಮಪಟ್ಟು ಕಾಡಾನೆಗೆ ಹಗ್ಗ ಕಟ್ಟಿ ರಸ್ತೆಗೆ ಎಳೆದು ತಂದು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸಕ್ಕರೆಬೈಲು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.