ನಗರ ಸ್ಥಳೀಯ ಸಂಸ್ಥೆಗಳಿಗಾಗಿ ಆರು ರಾಜ್ಯಗಳಿಗೆ ₹ 1348.10 ಕೋಟಿ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಇಂದು ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಒದಗಿಸಲು ಆರು ರಾಜ್ಯಗಳಿಗೆ ₹ 1348.10 ಕೋಟಿ ಬಿಡುಗಡೆ ಮಾಡಿದೆ.

ಶುಕ್ರವಾರ ಅನುದಾನ ಬಿಡುಗಡೆಯಾದ ರಾಜ್ಯಗಳೆಂದರೆ ಕರ್ನಾಟಕ (375 ಕೋಟಿ ), ಜಾರ್ಖಂಡ್ (112.20 ಕೋಟಿ), ಕೇರಳ (168 ಕೋಟಿ), ಒಡಿಶಾ (411 ಕೋಟಿ), ತಮಿಳುನಾಡು (267.90 ಕೋಟಿ) ಮತ್ತು ತ್ರಿಪುರಾ (14 ಕೋಟಿ). ಬಿಡುಗಡೆಯಾದ ಅನುದಾನವು ಕಂಟೋನ್ಮೆಂಟ್ ಮಂಡಳಿಗಳನ್ನು ಒಳಗೊಂಡಂತೆ ದಶಲಕ್ಷಕ್ಕಿಂತ ಅಧಿಕವಲ್ಲದ ಜನಸಂಖ್ಯೆಯ ನಗರಗಳಿಗೆ (ಎನ್.ಎಂ.ಪಿ.ಸಿ.ಗಳು) ಮೀಸಲಾಗಿದೆ.

15ನೇ ಹಣಕಾಸು ಆಯೋಗವು 2021-22ರಿಂದ 2025-26ನೇ ಸಾಲಿನ ತನ್ನ ವರದಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳನ್ನು ಎರಡು ಪ್ರವರ್ಗಗಳಾಗಿ ವಿಂಗಡಿಸಿದೆ: ದಶಲಕ್ಷಕ್ಕೂ ಅಧಿಕ ಜನಸಂಖ್ಯೆ ನಗರಪ್ರದೇಶಗಳು/ನಗರಗಳು (ದಿಲ್ಲಿ ಮತ್ತು ಶ್ರೀನಗರವನ್ನು ಹೊರತುಪಡಿಸಿ) ಮತ್ತು ಒಂದು ದಶಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಎಲ್ಲಾ ಇತರ ನಗರಗಳು ಹಾಗೂ ಪಟ್ಟಣಗಳು. ಅವುಗಳಿಗೆ ಪ್ರತ್ಯೇಕ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ. ದಶಲಕ್ಷ-ವಲ್ಲದ ನಗರಗಳಿಗೆ ಆಯೋಗವು ಶಿಫಾರಸು ಮಾಡಿದ ಒಟ್ಟು ಅನುದಾನಗಳಲ್ಲಿ ಶೇ. 40 ಮೂಲ (ಮುಕ್ತ) ಅನುದಾನ ಮತ್ತು ಉಳಿದ ಶೇ. 60 ಅನುದಾನವು ನಿರ್ಬಂಧಿತವಾಗಿದೆ. ಮೂಲ ಅನುದಾನಗಳನ್ನು (ಮುಕ್ತ) ಸಂಬಳದ ಪಾವತಿ ಮತ್ತು ಇತರ ಸ್ಥಾಪನೆಯ ವೆಚ್ಚ ಹೊರತುಪಡಿಸಿ, ಸ್ಥಳ ನಿರ್ದಿಷ್ಟ ಅಗತ್ಯಗಳಿಗಾಗಿ ಬಳಸಲಾಗುತ್ತದೆ.

ಮತ್ತೊಂದೆಡೆ, ಮೂಲಭೂತ ಸೇವೆಗಳ ವಿತರಣೆಯನ್ನು ಬೆಂಬಲಿಸಲು ಮತ್ತು ಬಲಪಡಿಸಲು ದಶಲಕ್ಷ-ವಲ್ಲದ ನಗರಗಳಿಗೆ ನಿರ್ಬಂಧಿತ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಒಟ್ಟು ನಿರ್ಬಂಧಿತ ಅನುದಾನದಲ್ಲಿ, ಶೇ. 50ನ್ನು ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಒ.ಎಚ್.ಯು.ಎ.) ಅಭಿವೃದ್ಧಿಪಡಿಸಿದ ಸ್ಟಾರ್ ಶ್ರೇಯಾಂಕಗಳನ್ನು ಸಾಧಿಸಲು ಮೀಸಲಿಡಲಾಗಿದೆ. ಉಳಿದ ಶೇ. 50ನ್ನು ಕುಡಿಯುವ ನೀರು, ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆಗೆ ತೆಗೆದಿರಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರವು ಇದುವರೆಗೆ ಒಟ್ಟು ₹ 10,699.33 ಕೋಟಿ ಮೊತ್ತವನ್ನು ದಶಲಕ್ಷ ಜನಸಂಖ್ಯೆಯಿಲ್ಲದ ನಗರಗಳಿಗೆ ಅನುದಾನವಾಗಿ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಶಿಫಾರಸುಗಳ ಮೇರೆಗೆ ಹಣಕಾಸು ಸಚಿವಾಲಯವು ಈ ಅನುದಾನವನ್ನು ಬಿಡುಗಡೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!