ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುವೈತ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಜೀವ ಕಳೆದುಕೊಂಡ ಭಾರತೀಯರ ಸಂಖ್ಯೆಯು 45ಕ್ಕೆ ಏರಿಕೆ ಆಗಿದೆ. ಅಷ್ಟೂ ಜನರ ಮೃತದೇಹಗಳನ್ನು ಕುವೈತ್‌ನ ಅಧಿಕಾರಿಗಳು ಗುರುತಿಸಿದ್ದಾರೆ. ಮೃತರಲ್ಲಿ ಫಿಲಿಪೀನ್ಸ್‌ನ ಮೂವರು ಇದ್ದಾರೆ. ಅಗ್ನಿ ದುರಂತದಲ್ಲಿ ಕನಿಷ್ಠ 49 ಮಂದಿ ಮೃತಪಟ್ಟಿದ್ದಾರೆ.
ಕುವೈತ್ ಅಗ್ನಿ ಅನಾಹುತದಲ್ಲಿ ಮೃತಪಟ್ಟ ಕೇರಳದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಏಳು ಮಂದಿಗೆ ಕುವೈತ್‌ನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟ ಭಾರತೀಯರಲ್ಲಿ ತಮಿಳುನಾಡಿನ ಐವರು ಇದ್ದಾರೆ.
ಕುವೈತ್‌ನ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ದೇಶದ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್‌ನ ಏಳು ಅಂತಸ್ತುಗಳ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 49 ಮಂದಿ ವಿದೇಶಿಯರು ಮೃತಪಟ್ಟಿದ್ದಾರೆ.
ಅಗ್ನಿ ದುರಂತದಲ್ಲಿ ಗಾಯಗೊಂಡ ಭಾರತೀಯರಿಗೆ ಚಿಕಿತ್ಸೆ ಒದಗಿಸುವ ಹಾಗೂ ಮೃತದೇಹಗಳನ್ನು ತ್ವರಿತವಾಗಿ ಭಾರತಕ್ಕೆ ತರುವ ಕಾರ್ಯದ ಮೇಲ್ವಿಚಾರಣೆಗೆ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಗುರುವಾರ ಕುವೈತ್ ತಲುಪಿದ್ದಾರೆ.
ಮೃತದೇಹಗಳ ಡಿಎನ್‌ಎ ಪರೀಕ್ಷೆಯನ್ನು ಕುವೈತ್‌ನ ಅಧಿಕಾರಿಗಳು ನಡೆಸುತ್ತಿದ್ದಾರೆ. ಭಾರತೀಯರ ಮೃತದೇಹಗಳನ್ನು ಹೊತ್ತು ತರಲು ಭಾರತೀಯ ವಾಯುಪಡೆಯ ವಿಮಾನವೊಂದು ಕುವೈತ್‌ನಲ್ಲಿ ಇದೆ ಎಂದು ದೆಹಲಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮತ್ತು ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರ ಜೊತೆ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ಕಡೆಯಿಂದ ಸಾಧ್ಯವಿರುವ ಎಲ್ಲ ಬಗೆಯ ನೆರವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.