ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಕಿ ಅವಘಡದಿಂದಾಗಿ ಏಳು ಮನೆಗಳು ಬೆಂಕಿಗಾಹುತಿಯಾಗಿರುವ ಘಟನೆ ಅಸ್ಸಾಂನ ದಿಬ್ರುಗಢದಲ್ಲಿ ನಡೆದಿದೆ. ಶನಿವಾರ ರಾತ್ರಿ ಸಂಭವಿಸಿದ ಈ ಅಪಘಾತದಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
“ಇಲ್ಲಿಯವರೆಗೆ ಸಾವುನೋವುಗಳ ಸಂಖ್ಯೆ ಅಥವಾ ಏನೆಲ್ಲಾ ಹಾನಿಯಾಗಿದೆ ಎಂಬುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ, 6-7 ಮನೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು ಎಂಬುದಷ್ಟೇ ನಮಗೆ ಮಾಹಿತಿ ಇದೆ” ಎಂದು ದಿಬ್ರುಗಢ ಪುರಸಭೆಯ ಉಪಾಧ್ಯಕ್ಷ ಉಜ್ವಲ್ ಫುಕನ್ ತಿಳಿಸಿದರು.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ 2 ಸಿಲಿಂಡರ್‌ಗಳು ಸ್ಫೋಟಗೊಂಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣವನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರಲು ಕಾರ್ಯಾಚರಣೆ ಆರಂಭಿಸಿದರು. ಪ್ರಸ್ತುತ ಬೆಂಕಿ ಹತೋಟಿಗೆ ಬಂದಿದೆ. ಪರಿಶೀಲನೆ ಬಳಿಕ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ, ಘಟನೆಗೆ ಕಾರಣವನ್ನು ಬಹಿರಂಗ ಪಡಿಸುತ್ತೇವೆ ಎಂದರು.