ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಮುಂಬೈನ ಭಾಟಿಯಾ ಆಸ್ಪತ್ರೆ ಬಳಿ 20 ಅಂತಸ್ತಿನ ಕಮಲಾ ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಏಳು ಮಂದಿ ಸಾವಿಗೀಡಾಗಿದ್ದಾರೆ. 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದೀಗ ಕೇಂದ್ರ, ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.
ಬೆಂಕಿ ಅನಾಹುತದಲ್ಲಿ ಪ್ರಾಣ ಕಳೆದುಕೊಂಡಿರುವ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(PMNRF)ಯಿಂದ ಪರಿಹಾರ ಘೋಷಣೆ ಮಾಡಲಾಗಿದ್ದು, ಗಾಯಗೊಂಡಿರುವವರಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಮಹಾರಾಷ್ಟ್ರ ಸರ್ಕಾರ ಕೂಡ ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ನೀಡಲಾಗುವುದು ಎಂದು ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ. ಜೊತೆಗೆ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ 7:30ರ ವೇಳೆ ಬಹುಮಹಡಿ ಕಟ್ಟಡದ 18ನೇ ಅಂತಸ್ತಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ.