ಅಂಕೋಲಾದಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಅಗ್ನಿ ಅವಘಡ

ದಿಗಂತ ವರದಿ ಅಂಕೋಲಾ:

ಪೆಟ್ಟಿಗೆ ಅಂಗಡಿಯೊಂದರಲ್ಲಿ ಬಳಸಲಾಗುತ್ತಿದ್ದ ಗ್ಯಾಸ್ ಸಿಲೆಂಡರ್ ಗೆ ಬೆಂಕಿ ಹೊತ್ತಿಕೊಂಡು ಉರಿದು ಪಕ್ಕದ ಅಂಗಡಿಗೂ ವ್ಯಾಪಿಸಿದ ಪರಿಣಾಮ ಎರಡು ಪೆಟ್ಟಿಗೆ ಅಂಗಡಿಗಳು ಸುಟ್ಟು ಕರಕಲಾದ ಘಟನೆ ಪಟ್ಟಣದ ಜೈಹಿಂದ್ ಹೈಸ್ಕೂಲ್ ರಸ್ತೆಯ ಅರಣ್ಯ ಇಲಾಖೆ ಕಚೇರಿಯ ಎದುರು ನಡೆದಿದೆ.

ನಾಗೇಶ ಗಾಂವಕರ್ ಎನ್ನುವವರಿಗೆ ಸೇರಿದ ಪೆಟ್ಟಿಗೆ ಅಂಗಡಿಯಲ್ಲಿ ಮಹಿಳೆಯೊಬ್ಬರು ಜೋಳದ ರೊಟ್ಟಿ ಮತ್ತಿತರ ಉಪಾಹಾರ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು ತಿಂಡಿ ತಯಾರಿಸುವ ಸಂದರ್ಭದಲ್ಲಿ ಅಂಗಡಿಯಲ್ಲಿ ಇದ್ದ ಗ್ಯಾಸ್ ಸಿಲೆಂಡರ್ ಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು ಪಕ್ಕದಲ್ಲಿದ್ದ ಅನಿತಾ ನಾಯ್ಕ ಎನ್ನುವವರ ಬಳೆ ಮತ್ತು ಆಟಿಕೆ ಸಾಮಗ್ರಿಗಳ ಅಂಗಡಿಗೂ ಬೆಂಕಿ ವ್ಯಾಪಿಸಿ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.

ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದ್ದು ಗ್ಯಾಸ್ ಸಿಲೆಂಡರ್ ಸ್ಪೋಟಗೊಳ್ಳುವುದನ್ನು ತಪ್ಪಿಸಿದ್ದಾರೆ,ಬೆಂಕಿಗೆ ಆಹುತಿಯಾದ ಪೆಟ್ಟಿಗೆ ಅಂಗಡಿಯ ಹಿಂಭಾಗದಲ್ಲಿ ಅರಣ್ಯ ಇಲಾಖೆ ಕಚೇರಿ, ಗಿಡ ಮರಗಳು,ಪಕ್ಕದಲ್ಲಿ ಸಾರ್ವಜನಿಕ ಗ್ರಂಥಾಲಯ, ವಾಚನಾಲಯ, ಪ್ಲಾಸ್ಟಿಕ್ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಿದ್ದು ಬೆಂಕಿ ವ್ಯಾಪಿಸಿದರೆ ಭಾರೀ ಪ್ರಮಾಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ.

ಪಟ್ಟಣದ ಜೈಹಿಂದ್ ಹೈಸ್ಕೂಲ್ ರಸ್ತೆ ಮತ್ತು ಜೈಹಿಂದ್ ಆಟದ ಮೈದಾನದ ಸುತ್ತ ಮುತ್ತಲಿನ ಪ್ರದೇಶ, ತಹಶೀಲ್ಧಾರರ ಕಾರ್ಯಾಲಯದ ಎದುರು ಫಾಸ್ಟ್ ಫುಡ್, ತಿಂಡಿ ತಿನಿಸುಗಳ ಪೆಟ್ಟಿಗೆ ಅಂಗಡಿಗಳು ಹೆಚ್ಚುತ್ತಿದ್ದು ಬಹಳಷ್ಟು ಅಂಗಡಿಗಳಲ್ಲಿ ಗ್ಯಾಸ್ ಸಿಲೆಂಡರ್ ಗಳ ಬಳಕೆ ನಡೆಯುತ್ತಿದೆ, ಮನೆ ಬಳಕೆಯ ಸಿಲೆಂಡರ್ ಗಳನ್ನು ಸಹ ಬಳಸಲಾಗುತ್ತಿದೆ ಇದರಿಂದಾಗಿ ಅಗ್ನಿ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!