ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ರಾಜ್‌ಕುಮಾರ್ ರಸ್ತೆಯ ಬಳಿ ಎಲೆಕ್ಟ್ರಿಕ್ ಬೈಕ್ ಶೋರೂಂ ನಲ್ಲಿ ನಡೆದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಶೋರೂಂ ಮಾಲೀಕ ಹಾಗೂ ಮ್ಯಾನೇಜರ್‌ನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಾಲೀಕ ಪುನೀತ್ ಹಾಗೂ ಮ್ಯಾನೇಜರ್ ಯುವರಾಜ್ ಎಂದು ಗುರುತಿಸಲಾಗಿದೆ.
ನ.19 ರಂದು ಸಂಜೆ 5:30ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ಓರ್ವ ಯುವತಿ ಸಜೀವ ದಹನಗೊಂಡಿದ್ದು, ಮೂವರು ಗಾಯಗೊಂಡಿದ್ದರು. ಶೋರೂಮ್‌ನಲ್ಲಿ ಸೇಲ್ಸ್ ಗರ್ಲ್ ಆಗಿದ್ದ ಪ್ರಿಯಾ ಎಂಬ ಯುವತಿ ಸಾವಿಗೀಡಾಗಿದ್ದಾಳೆ.
ಇಂದು ಎಫ್‌ಎಸ್‌ಎಲ್ (FSL) ತಂಡದಿಂದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಗ್ನಿ ಅವಘಡ ಸಂಬಂಧ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದೆ. ಪೊಲೀಸರು ಮೂವರು ಗಾಯಾಳುಗಳ ಹೇಳಿಕೆ ಪಡೆದುಕೊಂಡಿದ್ದು, ಯುವತಿಯ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ತನಿಖೆ ನಡೆಸಲಿದ್ದಾರೆ.
ಘಟನೆಯ ಬಳಿಕ ಶೋ ರೂಂ ಮಾಲೀಕ ಪುನೀತ್ ಪರಾರಿಯಾಗಿದ್ದ. ಇದೀಗ ಮಾಲೀಕನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಬಿಎನ್‌ಎಸ್ 106 ಅಡಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಮ್ಯಾನೇಜರ್ ಯುವರಾಜ್‌ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.