ಬಂದೂಕಿನಿಂದ ಹಾರಿದ ಗುಂಡು: ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾತ್ರಿಪಾಳಿ ಕರ್ತವ್ಯದಲ್ಲಿದ್ದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ (44) ತನ್ನದೇ ಕೈಯಲ್ಲಿದ್ದ .303 ರೈಫಲ್‌ನ ಗುಂಡಿಗೆ ಬಲಿಯಾದ ಘಟನೆ ನಗರದ ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ಸಂಭವಿಸಿದೆ.
ಗುಂಡು ಅವರ ಗಲ್ಲದ ಕೆಳಗಿನಿಂದ ಒಳಗೆ ತೂರಿದ್ದು, ಹಣೆಯಿಂದ ಹೊರಗೆ ಬಂದಿದ್ದು, ಪೊಲೀಸರು ಆಕಸ್ಮಿಕ ಗುಂಡು ತಗಲಿ ಮೃತಪಟ್ಟಿದ್ದಾರೆ ಎಂದು ಯು.ಡಿ.ಆರ್. ದಾಖಲಿಸಿದ್ದಾರೆ. ಆದರೇ ರಾಜೇಶ್ ಕುಂದರ್ ಅವರು ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಗುರುವಾರ ರಾತ್ರಿ ಆದಿ ಉಡುಪಿ ಶಾಲೆಯಲ್ಲಿ ಹತ್ತನೇ ತರಗತಿ ಅಂತಿಮ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‌ನ ಕಾವಲಿಗೆಂದು ಮೂವರು ಪೊಲೀಸರು ನಿಯೋಜನೆಗೊಂಡಿದ್ದು, ಅವರಲ್ಲಿ ಒಬ್ಬರಾದ ರಾಜೇಶ್ ಮೊದಲನೇ ಮಹಡಿಯಲ್ಲಿ ಕಾವಲು ಕಾಯುತ್ತಿದ್ದರು. ಕರ್ತವ್ಯದಲ್ಲಿದ್ದಾಗಲೇ ರಾತ್ರಿ 9.30ರಿಂದ ಶುಕ್ರವಾರ ಬೆಳಗ್ಗೆ 10ಯ ಒಳಗೆ ಗುಂಡು ಹಾರಿದೆ ಎಂದು ನಗರ ಠಾಣೆಯ ಯುಡಿಆರ್‌ನಲ್ಲಿ ಬರೆಯಲಾಗಿದೆ.
ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಸರಕಾರಿ ಎಫ್.ಎಸ್.ಎಲ್. ಮತ್ತು ಖಾಸಗಿ ಎಫ್.ಎಸ್.ಎಲ್. ತಂಡದಿಂದ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಯಿತು. ಸ್ಥಳದಲ್ಲಿ ಉಡುಪಿ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ನಾಯ್ಕ್, ವೃತ್ತ ನಿರೀಕ್ಷಕ ಪ್ರಮೋದ್, ಡಿ.ಆರ್. ಅಕಾರಿ ರಾಘವೇಂದ್ರ ಸೇರಿದಂತೆ ಅಕಾರಿ ಮತ್ತು ಸಿಬ್ಬಂದಿ ಮೊಕ್ಕಾಂ ಹೂಡಿದ್ದರು.
ಪೊಲೀಸ್ ಜೀಪಿನಲ್ಲಿ ಬಂದ ಮನೆಯವರು
ಮೂಲತ ಬೈಂದೂರಿನ ನಾವುಂದದವರಾದ ರಾಜೇಶ್, ಅವರು ಮಡದಿ ಮತ್ತು ಮಕ್ಕಳ ಜೊತೆ ಮಣಿಪಾಲದ 9ನೇ ಬ್ಲಾಕಿನ ಪೊಲೀಸ್ ಕ್ವಾಟ್ರಸ್ ನಂಬರ್ 101ರಲ್ಲಿ ವಾಸವಿದ್ದರು. ಅವರು ಮತ್ತು ಕುಟುಂಬಸ್ಥರನ್ನು ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ವಾಹನದಲ್ಲೇ ಕರೆ ತರಲಾಯಿತು. ಕುಟುಂಬಸ್ಥರ ಸಮ್ಮುಖದಲ್ಲೇ, ಮಹಜರು ಮತ್ತು ಪಂಚನಾಮೆ ಪ್ರಕ್ರಿಯೆಗಳು ನಡೆದಿದ್ದು, ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
ಆಕಸ್ಮಿಕವೋ, ಆತ್ಮಹತ್ಯೆಯೇ?
2 ಪ್ಲಾಸ್ಟಿಕ್ ಚೇರ್‌ಗಳನ್ನು ಹಾಕಿ ಸ್ಟ್ರಾಂಗ್ ರೂಮಿನ ಬಾಗಿಲ ಮುಂದೆಯೇ ಕುಳಿತುಕೊಂಡಿದ್ದ ರಾಜೇಶ್, ಅದೇ ಸ್ಥಿತಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಡತೂಸು ರಾಜೇಶ್ ಅವರ ಮೆದುಳು ಮತ್ತು ಬುರುಡೆಯನ್ನು ಚಿಂದಿ ಮಾಡಿದ್ದು, ನೆಲದ ಮೇಲೆ ನೆತ್ತರು ಹರಡಿಕೊಂಡಿತ್ತು.
ರಾಜೇಶ್ ಕುಂದರ್ ಕುರ್ಚಿಯಲ್ಲಿ ಕುಳಿತು ಸ್ಥಿತಿಯಲ್ಲಿ ಎದೆಗೆ ಆನಿಸಿ ಹಿಡಿದಿದ್ದ ರೈಫಲ್‌ನಿಂದ ಗುಂಡು ಆಕಸ್ಮಿಕವಾಗಿ ಹಾರಿ ಅವರ ಸಾವು ಸಂಭವಿಸಿದೆ ಎಂದು ಪೊಲೀಸರು ಈ ಪ್ರಕರಣವನ್ನು ಆಕಸ್ಮಿಕ ಘಟನೆ ಎಂದು ಯುಡಿಆರ್‌ನಲ್ಲಿ ದಾಖಲಿಸಿದ್ದಾರೆ. ಆದರೇ ಪಾಯಿಂಟ್ 303 ರೈಫಲ್‌ಗೆ ಲಾಕ್ ವ್ಯವಸ್ಥೆ ಇದ್ದು, ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರುವುದಿಲ್ಲ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!