ಮಂಡ್ಯದಲ್ಲಿ ಪಟಾಕಿ ತುಂಬುವ ವೇಳೆ ಭೀಕರ ಸ್ಫೋಟ: ಓರ್ವ ಸಾವು

ಹೊಸದಿಗಂತ ವರದಿ, ಮಂಡ್ಯ :

ಗ್ರಾಮ ದೇವತೆ ಹಬ್ಬದ ಅಂಗವಾಗಿ ಆಲೆಮನೆಯೊಂದರಲ್ಲಿ ದಾಸ್ತಾನು ಮಾಡಿದ್ದ ಪಟಾಕಿಗೆ ಬೆಂಕಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಜಿ. ಕೆಬ್ಬಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಮಿಳುನಾಡು ಮೂಲದ ರಮೇಶ (45) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಗಲಿಂಗು (55) ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾರೆ.

ನಿನ್ನೆ ಮತ್ತು ಇಂದು ಕೆಬ್ಬಹಳ್ಳಿ ಗ್ರಾಮದಲ್ಲಿರುವ ಬೋರೇ ದೇವರ (ಕಾಲಭೈರವ) ಉತ್ಸವ ಇತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಸಿಡಿಮದ್ದು ಸಿಡಿಸುವವರನ್ನು ಕರೆತರಲಾಗಿತ್ತು. ರಾತ್ರಿ ಪೂರ್ತಾ ನಡೆದ ಉತ್ಸವದಲ್ಲಿ ರಾಜು, ರಾಮಲಿಂಗು ಸೇರಿದಂತೆ ಹಲವರು ಸಿಡಿಮದ್ದುಗಳನ್ನು ಸಿಡಿಸಿದ್ದರು.

ಸಿಡಿಮದ್ದುಗಳನ್ನು ಗ್ರಾಮದ ಹೊರ ವಲಯದಲ್ಲಿರುವ ಆಲೆಮನೆಯೊಂದರಲ್ಲಿ ದಾಸ್ತಾನು ಮಾಡಲಾಗಿತ್ತು. ಸಿಡಿಮದ್ದುಗಳನ್ನು ಸಿಡಿಸಿದ ರಾಜು ಅವರು ಮುಂಜಾನೆ ಆಲೆಮನೆಗೆ ವಾಪಸ್ಸಾಗಿ ದಾಸ್ತಾನಿನಲ್ಲಿ ಉಳಿದಿದ್ದ ಸಿಡಿಮದ್ದುಗಳನ್ನು ಚೀಲಕ್ಕೆ ತುಂಬುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಇಡೀ ಆಲೆಮನೆ ಛಿದ್ರಗೊಂಡಿದೆ. ಘಟನೆಯಲ್ಲಿ ರಾಜು ಸ್ಥಳದಲ್ಲೇ ಸಾವನ್ನಪ್ಪಿದರೆ, ರಾಮಲಿಂಗು ಬೆಂಕಿಯಿಂದ ತೀವ್ರವಾಗಿ ಸುಟ್ಟಗಾಯಗಳಾದವು.

ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮತ್ತು ಪೊಲೀಸರು ಗಾಯಾಳುವನ್ನು ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.

ಮೈಸೂರು ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್. ಜಯರಾಮಯ್ಯ, ಮೈಸೂರು ವಲಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ. ಚಂದನ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ. ರಾಘವೇಂದ್ರ, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಅಗ್ನಿ ನಂದಿಸಿದ್ದಾರೆ.

ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!