ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿಯ ಪಟಾಕಿ ಅವಘಡದಲ್ಲಿ 43 ಮಂದಿ ಗಾಯಗೊಂಡಿದ್ದಾರೆ.
ದೀಪಾವಳಿಯಂದು ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮಿಸುತ್ತಾರೆ, ಆದರೆ ಕೆಲವೊಮ್ಮೆ ಯಾರೋ ಪಟಾಕಿ ಹಚ್ಚುವ ಸಂದರ್ಭದಲ್ಲಿ ಇನ್ಯಾರಿಗೂ ಗಾಯಗಳಾಗುತ್ತವೆ, ಮಕ್ಕಳಿಗೆ ಪಟಾಕಿ ಹೊಡೆಯುವ ಬಗ್ಗೆ ಮುಂಜಾಗ್ರತಾ ಕ್ರಮಗಳು ಗೊತ್ತಿರದ ಕಾರಣ ಗಾಯಗಳಾಗುತ್ತವೆ.
ಈ ಬಾರಿ ಒಟ್ಟಾರೆ ೪೩ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಮಮೂರ್ತಿ ನಗರದಲ್ಲಿ ಸುರುಸುರು ಬತ್ತಿ ಹಚ್ಚುವಾಗ ಕಣ್ಣಿಗೆ ಕಿಡಿ ತಾಗಿ ಮೂರು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ.
ಶ್ರೀರಾಂಪುರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಬೇರೆಯವರು ಹಚ್ಚಿದ ಪಟಾಕಿ ಯುವಕನ ಕಣ್ಣಿಗೆ ಬಿದ್ದಿದ್ದು, ತೀವ್ರ ಗಾಯಗಳಾಗಿವೆ. ಹೆಚ್ಚಿನ ಅವಘಡಗಳಲ್ಲಿ ಪಟಾಕಿ ಹಚ್ಚುವವರಿಗಿಂತ ನೋಡುತ್ತಾ ನಿಂತವರಿಗೇ ಗಾಯಗಳಾಗಿವೆ.
ಪಟಾಕಿ ಹಚ್ಚದೇ ಇದ್ದರೂ ನೋಡುತ್ತಾ ನಿಂತಿದ್ದವರಿಗೆ ಲಕ್ಷ್ಮಿ ಬಾಂಬ್ ಹಾಗೂ ಬಿಜಿಲಿ ಪಟಾಕಿಯಿಂದ ಗಾಯಗಳಾಗಿವೆ. ಗಾಯಗೊಂಡವರಲ್ಲಿ ೧೩ ಮಕ್ಕಳಿದ್ದಾರೆ.
ಸುರಕ್ಷಾ ಕ್ರಮಗಳೇನು?
- ಅತಿಯಾಗಿ ಶಬ್ದಮಾಡುವ, ಹೆಚ್ಚು ಡೇಂಜರ್ ಎನಿಸುವ ಪಟಾಕಿಗಳನ್ನು ತರಲೇಬೇಡಿ.
- ಕಡಿಮೆ ಬೆಲೆಗೆ ಸಿಗುವ ಪಟಾಕಿಗಳಿಗಿಂತ ಹೆಚ್ಚು ಕ್ವಾಲಿಟಿ ಇರುವ ಪಟಾಕಿಗಳನ್ನು ಕೊಂಡುಕೊಳ್ಳಿ
- ಮಕ್ಕಳಿಗೆ ಪಟಾಕಿ ಹೊಡೆಯಲು ಬಿಡಬೇಡಿ, ದೊಡ್ಡವರಿದ್ದಾಗ ಮಾತ್ರ ಪಟಾಕಿ ಹೊಡೆಯಬೇಕು ಎಂದು ತಿಳಿಸಿ
- ಎಲೆಕ್ಟ್ರಿಕಲ್ ವೈರ್‌ಗಳು ಸುತ್ತ ಮುತ್ತ ಇದ್ದರೆ ಆ ಜಾಗದಲ್ಲಿ ಪಟಾಕಿ ಹೊಡೆಯುವುದು ಸೂಕ್ತವಲ್ಲ.
- ಹೆಚ್ಚು ಜನ ಇರುವ ಅಥವಾ ಹೆಚ್ಚು ಜನ ಓಡಾಡುವ ರಸ್ತೆಯಲ್ಲಿ ಪಟಾಕಿ ಹೊಡೆಯಬೇಡಿ
- ಪಟಾಕಿಯಿಂದ ಗಾಯವಾದರೆ ಮನೆಮದ್ದು ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ