ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ಹೊಣೆಹೊತ್ತ ಲಾರೆನ್ಸ್ ಬಿಷ್ಣೋಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆನಡಾದ ವಾಂಕೋವರ್‌ ನಗರದ ವೈಟ್ ರಾಕ್ ಎಂಬ ಪ್ರದೇಶದಲ್ಲಿ ಪಂಜಾಬಿ ಗಾಯಕ ಹಾಗೂ ನಟ ಗಿಪ್ಪಿ ಗ್ರೇವಾಲ್‌ನ ಮನೆ ಎದುರು ಗುಂಡಿನ ಕಾಳಗ ನಡೆದಿದೆ.

ನಿವಾಸದ ಎದುರು ಶನಿವಾರ ರಾತ್ರಿ ಗುಂಡಿನ ಸದ್ದು ಕೇಳಿ ಬಂದಿತ್ತು. ಇದೀಗ ಈ ಕೃತ್ಯದ ಹೊಣೆಯನ್ನು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೊತ್ತಿದ್ದಾನೆ.

ಈ ಕುರಿತಾಗಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಲಾರೆನ್ಸ್ ಬಿಷ್ಣೋಯ್, ಈ ಗುಂಡಿನ ಕಾಳಗ ನನ್ನ ನಿರ್ದೇಶನದ ಮೇರೆಗೆ ನಡೆದಿದೆ ಎಂದು ಹೇಳಿದ್ದಾನೆ.

ಜೊತೆಗೆ ಪಂಜಾಬಿ ನಟ ಗಿಪ್ಪಿ ಗ್ರೇವಾಲ್‌ಗೆ ನೇರಾನೇರ ಎಚ್ಚರಿಕೆ ನೀಡಿರುವ ಲಾರೆನ್ಸ್ ಬಿಷ್ಣೋಯ್, ‘ನೀನು ಬಾಲಿವುಡ್‌ ನಟ ಸಲ್ಮಾನ್ ಖಾನ್‌ನನ್ನು ಅಣ್ಣ ಎಂದು ಭಾವಿಸಿದ್ದೀಯ. ಇದೀಗ ನಿಮ್ಮ ಅಣ್ಣನೇ ಬಂದು ನಿನ್ನನ್ನು ರಕ್ಷಣೆ ಮಾಡಬೇಕಿದೆ. ನನ್ನ ಈ ಸಂದೇಶ ಸಲ್ಮಾನ್ ಖಾನ್‌ಗೂ ಅನ್ವಯಿಸುತ್ತೆ. ದಾವೂದ್ ಬಂದು ನಿನ್ನನ್ನು ರಕ್ಷಿಸುತ್ತಾನೆ ಅನ್ನೋ ಭ್ರಮೆ ಬೇಡ. ನಿನ್ನನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ. ಸಿಧು ಮೂಸೆವಾಲಾ ಹತ್ಯೆಯಾದಾಗ ನೀನು ಕೊಟ್ಟ ನಾಟಕೀಯ ಪ್ರತಿಕ್ರಿಯೆಯನ್ನು ಯಾರೂ ಮರೆತಿಲ್ಲ. ಆತ ಎಂಥಾ ವ್ಯಕ್ತಿಯಾಗಿದ್ದ, ಆತನಿಗೆ ಯಾವ ರೀತಿಯ ಅಪರಾಧ ಹಿನ್ನೆಲೆ ಇತ್ತು ಅನ್ನೋದು ನಮ್ಮೆಲ್ಲರಿಗೂ ಗೊತ್ತು. ನೀನು ಸಿಧು ಮೂಸೆವಾಲಾ ಸತ್ತಾಗ ತುಂಬಾನೇ ಶೋಕ ಅನುಭವಿಸಿದೆ. ಇದೀಗ ನೀನು ನಮ್ಮ ರಾಡಾರ್‌ನಲ್ಲಿ ಇದ್ದೀಯ. ಈಗ ನಡೆದಿರುವ ಗುಂಡಿನ ಕಾಳಗವನ್ನು ಕೇವಲ ಟ್ರೈಲರ್‌ ಎಂದು ಪರಿಗಣಿಸು. ಪೂರ್ತಿ ಸಿನೆಮಾ ಇನ್ನೂ ಬಾಕಿ ಇದೆ. ನಿನಗೆ ಇಷ್ಟ ಆಗುವ ಯಾವುದೇ ದೇಶಕ್ಕಾದರೂ ಪರಾರಿ ಆಗು. ಆದರೆ ಒಂದು ಮಾತು ನೆನಪಿರಲಿ, ಸಾವಿಗೆ ಯಾವುದೇ ವೀಸಾ ಬೇಕಿಲ್ಲ. ಅದು ಯಾವುದೇ ಆಹ್ವಾನ ಇಲ್ಲದೆ ಬಂದೇ ಬರುತ್ತದೆ’ ಎಂದು ವಾರ್ನಿಂಗ್ ಕೊಟ್ಟಿದ್ದಾನೆ.

ಈ ಕುರಿತಾಗಿ ಪಂಜಾಬಿ ಗಾಯಕ ಹಾಗೂ ನಟ ಗಿಪ್ಪಿ ಗ್ರೇವಾಲ್ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!