ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ಜಿಲ್ಲೆಯ ಕೆಂಬಾಳೆ ಊರು ಕಮಲಾಪೂರದಲ್ಲಿ ಶನಿವಾರ ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಬಸವರಾಜ ಮತ್ತಿಮೂಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚೊಚ್ಚಲ ಪ್ರಜಾ ಸೇವೆ ಸಭೆ ಯಶಸ್ವಿಯಾಗಿದ್ದು, ವಿವಿಧ ಇಲಾಖೆಯ ಸುಮಾರು 1,061 ಅರ್ಜಿ ಸಲ್ಲಿಕೆಯಾಗಿವೆ.
ಅಹವಾಲು ನಿಮ್ಮದು, ಪರಿಹಾರ ನಮ್ಮದು ಎಂಬ ಧ್ಯೇಯ ಉದ್ದೇಶದ ಪ್ರಜಾ ಸೇವೆ ಸಭೆಗೆ ದೂರು, ದುಮ್ಮಾನು ಹೊತ್ತಿಕೊಂಡ ಬಂದ ನೂರಾರು ಸಾರ್ವಜನಿಕರ ಸಮಸ್ಯೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸ್ಥಳೀಯ ಶಾಸಕ ಬಸವರಾಜ ಮತ್ತಿಮೂಡ ಶಾಂತ ಚಿತ್ತದಿಂದಲೆ ಆಲಿಸಿದರು. ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು, ವಿಶೇಷಚೇತನರು ಹೀಗೆ ಸರ್ವರ ಸಮಸ್ಯೆ ಗೆ ಕಿವಿಯಾಗುವ ಮೂಲಕ ಇದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ ಎಂಬುದನ್ನು ನಿರೂಪಿಸಿದರು.
ಇದನ್ನೂ ಓದಿ:
ಇಂದಿನ ಸಭೆಯಲ್ಲಿ ಸ್ವೀಕೃತ ಎಲ್ಲಾ ಅರ್ಜಿಗಳನ್ನು ಪ್ರಥಮಾದ್ಯತೆ ಮೇಲೆ ವಿಲೇವಾರಿ ಮಾಡುವಂತೆ ಸಭೆಯಲ್ಲಿದ್ದ ಡಿ.ಸಿ. ಅವರಿಗೆ ಸೂಚಿಸಿದ ಸಚಿವರು, ಸರ್ಕಾರದ ಅದೇಶದಂತೆ ಪ್ರತಿ ಬುಧವಾರ ಈ ಅರ್ಜಿಗಳನ್ನು ತಹಶೀಲ್ದಾರರ, ಎ.ಸಿ, ಡಿ.ಸಿ. ಹಂತದಲ್ಲಿ ಪರಿಶೀಲಿಸಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು. ಇನ್ನು ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ಅಂತಹ ಅರ್ಜಿದಾರರಿಗೆ ಸಕಾರಣದೊಂದಿಗೆ ಹಿಂಬರಹ ಸಹ ನೀಡಬೇಕೆಂದರು.
ಕಂದಾಯಕ್ಕೆ ಸಂಬಂಧಿಸಿದ 526 ಅರ್ಜಿ ಸಲ್ಲಿಕೆ:
ಪ್ರಜಾ ಸೇವೆ ಸಭೆಯಲ್ಲಿ ಸ್ವೀಕೃತ 1,061 ಅರ್ಜಿ ಪೈಕಿ ಮಾತೃ ಇಲಾಖೆ ಎಂದು ಕರೆಯಲ್ಪಡುವ ಕಂದಾಯ ಇಲಾಖೆಗೆ ಸಂಬಂಧಿಸಿದ 526 ಅರ್ಜಿ ಸಲ್ಲಿಕೆಯಾಗಿವೆ. ಉಳಿದಂತೆ ವಸತಿ-125, ಗ್ರಾಮೀಣಾಭಿವೃದ್ಧಿ-100, ಆಹಾರ-60, ಕೆ.ಆರ್.ಐ.ಡಿ.ಎಲ್-51, ಇಂಧನ-36, ಲೋಕೋಪಯೋಗಿ-31, ಪಂಚಾಯತ್ ರಾಜ್ ಇಂಜಿನಿಯರಿಂಗ್-31, ಕೃಷಿ-21, ಮಹಿಳಾ ಮತ್ರು ಮಕ್ಕಳ ಕಲ್ಯಾಣ-19, ನೀರಾವರಿ-18, ಸಾರಿಗೆ-16, ನಗರಾಭಿವೃದ್ಧಿ-15, ಸಮಾಜ ಕಲ್ಯಾಣ-12 ಸಲ್ಲಿಕೆಯಾಗಿವೆ. ಉಳಿದಂತೆ ಇನ್ನಿತರ ಇಲಾಖೆಗಳು ಒಂದಂಕಿಯಲ್ಲಿ ಅರ್ಜಿ ಸ್ವೀಕರಿಸಲ್ಪಟ್ಟಿವೆ.



