Saturday, October 11, 2025

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆ: ಸಮರ್ಪಕ‌ ಅಭಿವೃದ್ಧಿಗಾಗಿ GBA ಅಸ್ತಿತ್ವ ಎಂದ ಸಿಎಂ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಕೆಂಪೇಗೌಡ ಪೌರ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಿಎಂ , ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸಮಸ್ತ ಜನರಿಗೆ ಸುಗಮ ಆಡಳಿತ, ಸಮರ್ಪಕ‌ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ತಂದು ಐದು ಕಾರ್ಪೋರೇಷನ್‌ಗಳನ್ನು ರಚನೆ ಮಾಡಿದ್ದೇವೆ ಎಂದರು.

ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ತಲುಪಿದೆ. ಒಂದು ಕಾರ್ಪೋರೇಷನ್‌ನಿಂದ ಇಷ್ಟು ದೊಡ್ಡ ನಗರದ ಸಮರ್ಪಕ ಅಭಿವೃದ್ಧಿ ಬಹಳ ದೊಡ್ಡ ಸವಾಲಿನದ್ದು. ಈ ಚರ್ಚೆ ಹಲವು ವರ್ಷಗಳಿಂದ ಇದ್ದೇ ಇದೆ. ಒಂದಕ್ಕಿಂತ ಹೆಚ್ಚು ಕಾರ್ಪೋರೇಷನ್‌ಗಳಿದ್ದರೆ ವೇಗದ ಅಭಿವೃದ್ಧಿ ಸಾಧ್ಯ ಎನ್ನುವ ಕಾರಣಕ್ಕೆ ಈ ಬಗ್ಗೆ ವರದಿ ಕೊಡಲು ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಸಮಿತಿ ರಚಿಸಿದ್ದೆ, ನಂತರ ಬಂದ ಸರ್ಕಾರಗಳು ಈ ದಿಕ್ಕಿನಲ್ಲಿ ಗಮನ ಹರಿಸಲೇ ಇಲ್ಲ. ಹೀಗಾಗಿ ನಮ್ಮ ಸರ್ಕಾರವೇ ಪುನಃ ಅಧಿಕಾರಕ್ಕೆ ಬಂದ ಬಳಿಕ ಸಮಿತಿಯನ್ನು ಪುನರ್ ರಚಿಸಿತು. ಈ ಸಮಿತಿ ವರದಿಯಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 5 ನಗರ ಪಾಲಿಕೆಗಳ ರಚನೆಯಾಗಿವೆ ಎಂದು ಹೇಳಿದರು.

ಸುಗಮ ಕಸ ವಿಲೇವಾರಿ ಆಗಬೇಕು. ಪಾಲಿಕೆಗಳ ಆದಾಯ ಹೆಚ್ಚಳ ಆಗಬೇಕು. ಟ್ರಾಫಿಕ್ ದಟ್ಟಣೆ ನಿವಾರಣೆ ಆಗಬೇಕು. ನಗರವನ್ನು ಚೊಕ್ಕವಾಗಿಡಬೇಕು. ರಸ್ತೆ,ಚರಂಡಿ,ಫುಟ್ಪಾತ್, ಪಾರ್ಕ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಮಾದರಿ ಪಾಲಿಕೆಗಳನ್ನಾಗಿ ರೂಪಿಸಬೇಕು ಎನ್ನುವ ಮಹತ್ತರ ಗುರಿ ಮತ್ತು ಉದ್ದೇಶಳನ್ನು ಇಟ್ಟುಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಈ ಎಲ್ಲಾ ಕಾರ್ಯಕ್ಕೆ ಸರ್ಕಾರದ ಜೊತೆಗೆ ಸಮನ್ವಯ ಅಗತ್ಯ. ಮುಂದಿನ ದಿನಗಳಲ್ಲಿ ಎಲ್ಲಾ ಸಂಬಂಧಪಟ್ಟ ಇಲಾಖೆಗಳು, ಬೆಂಗಳೂರು ನಾಗರಿಕರಿಗೆ ಸೇವೆ ಒದಗಿಸುತ್ತಿರುವ ಬಿಡಿಎ, ಬಿಡಬ್ಲುಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಆರ್‌ಸಿಎಲ್‌ನಂತಹ ಸಂಸ್ಥೆಗಳು ಜಿಬಿಎ ಜತೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. .

ಚರ್ಚೆ-ಸಂವಾದದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಏನೇ ವಿರೋಧಗಳಿದ್ದರೂ ಸಭೆಗೆ ಹಾಜರಾಗಿ ಚರ್ಚೆ ನಡೆಸಿ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಬೇಕು.
ಅಧಿಕಾರ ವಿಕೇಂದ್ರೀಕರಣವನ್ನು ವಿರೋಧಿಸುವವರು ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಒಲ್ಲದವರು ಸಭೆಯನ್ನು ವಿರೋಧಿಸುತ್ತಾರೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.

error: Content is protected !!