ವೈದ್ಯಕೀಯ ಕ್ಷೇತ್ರದಲ್ಲಿ ನಡೆಯಿತು ಪವಾಡ: ಮಾರಕ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ ಆವಿಷ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
‘ ಕ್ಯಾನ್ಸರ್ ರೋಗ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಜಗತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ’ ಪವಾಡವೊಂದು ನಡೆದುಹೋಗಿದೆ. ಅಮೆರಿಕಾದಲ್ಲಿ ಕ್ಯಾನ್ಸ್‌ ನಿಂದ ಬಳಲುತ್ತಿದ್ದ 18 ರೋಗಿಗಳಿಗೆ ಪರೀಕ್ಷಾರ್ಥವಾಗಿ ನೀಡಲಾಗುತ್ತಿದ್ದ ಔಷಧವೊಂದರಿಂದ ಕ್ಯಾನ್ಸರ್‌ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ.
ಮಾರಕ ರೋಗ ಕ್ಯಾನ್ಸರ್‌ ನಿಂದ ಜಗತ್ತಿನಲ್ಲಿ ಕೋಟ್ಯಾಂತರ ಮಂದಿ ಬಳಲುತ್ತಿದ್ದಾರೆ. ಯಾತನಾದಾಯಕ ರೋಗಲಕ್ಷಣಗಳು ಹಾಗೂ ಅಪಾರ ವೈದ್ಯಕೀಯ ವೆಚ್ಚಗಳ ಕಾರಣದಿಂದ ಕ್ಯಾನ್ಸರ್‌ ಮನುಕುಲಕ್ಕೆ ಶಾಪವಾಗಿ ಕಾಡುತ್ತಿದೆ. ವೈದ್ಯಕೀಯ  ಕ್ಷೇತ್ರ ಏಷ್ಟೇ ಬೆಳೆದರೂ ಇಂದಿಗೂ ಕ್ಯಾನ್ಸರ್‌ ಗೆ ಸೂಕ್ತ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಜೊತೆಗೆ ಕ್ಯಾನ್ಸರ್‌ ಪೀಡಿತರಾಗಿ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಆದರೆ ಇದೀಗ ಇಡೀ ಜಗತ್ತೇ ಕಣ್ಣರಳಿಸಿ ಗಮನಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ.
ಒಂದು ಸಣ್ಣ ಕ್ಲಿನಿಕಲ್ ಪ್ರಯೋಗವು ಮಾನವ ಜನಾಂಗವನ್ನು ಕ್ಯಾನ್ಸರ್‌ ನಿಂದ ಮುಕ್ತಗೊಳಿಸುವ ದೊಡ್ಡ ಭರವಸೆಯನ್ನು ಹುಟ್ಟುಹಾಕಿದೆ.
ಅಮೆರಿಕಾದ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ಕ್ಯಾನ್ಸರ್‌ ಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ನಡೆಸುತ್ತಿತ್ತು.  ಗುದನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 18 ರೋಗಿಗಳಿಗೆ ಸುಮಾರು ಆರು ತಿಂಗಳ ಕಾಲ ʼದೋಸ್ಟಾರ್ಲಿಮಾಬ್ʼ ಎಂಬ ಔಷಧಿಯನ್ನು ನೀಡಲಾಗಿತ್ತು. ಪ್ರಯೋಗದ ಫಲಿತಾಂಶಗಳನ್ನು ಪರೀಕ್ಷಿಸಿದಾಗ ರೋಗಿಗಳು ಮಾತ್ರವಲ್ಲ ಸ್ವತಃ ವೈದ್ಯರೇ ಬೆಚ್ಚಿಬಿದ್ದರು. ಪ್ರಾಯೋಗಿಕ ಚಿಕಿತ್ಸೆಯನ್ನು ಪಡೆದ ಪ್ರತಿಯೊಬ್ಬ ಕ್ಯಾನ್ಸರ್ ರೋಗಿಯ ದೇಹದಲ್ಲಿ ಕ್ಯಾನ್ಸರ್ ರೋಗವೇ ಸಂಪೂರ್ಣವಾಗಿ ಮಾಯವಾಗಿತ್ತು.
ಇದನ್ನು ನಂಬದ ವೈದ್ಯರು, ಕ್ಯಾನ್ಸರ್‌ ಪತ್ತೆ ಪರೀಕ್ಷೆಗಳಾದ ಎಂಡೋಸ್ಕೋಪಿ, ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ (ಪಿಇಟಿ ಸ್ಕ್ಯಾನ್‌ಗಳು) ಎಂಆರ್‌ಐ ಸ್ಕ್ಯಾನ್‌ಗಳನ್ನು ನಡೆಸಿ ನೋಡಿದರು. ಆದರೆ ಯಾವೆಲ್ಲಾ ಪರೀಕ್ಷೆಗಳನ್ನು ನಡೆಸಿದರೂ ರೋಗಿಗಳಲ್ಲಿ ಕ್ಯಾನ್ಸರ್‌ ಗೆಡ್ಡೆ ಕಾಣಿಸುತ್ತಿಲ್ಲ.
ಅತ್ಯಂತ ಮಾರಕ ಸಾಮಾನ್ಯ ಕ್ಯಾನ್ಸರ್‌ಗೆ ದೋಸ್ಟಾರ್ಲಿಮಾಬ್ ‘ಸಂಭಾವ್ಯ’ ಚಿಕಿತ್ಸೆಯಾಗಬಲ್ಲದು ಎಂಬುದನ್ನು ಇದು ಸಾಬೀತುಪಡಿಸುತ್ತದೆ. ತಜ್ಞರ ಪ್ರಕಾರ, ದೋಸ್ಟಾರ್ಲಿಮಾಬ್ ಮಾನವ ದೇಹದಲ್ಲಿ ಕ್ಯಾನ್ಸರ್ಗೆ ಬದಲಿ ಪ್ರತಿಕಾಯಗಳಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಈ ಪ್ರಯೋಗ ಜಗತ್ತಿನಲ್ಲಿ ಸಂಚಲನ ಹುಟ್ಟುಹಾಕಿದೆ.
ಕ್ಲಿನಿಕಲ್ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವ ರೋಗಿಗಳು ಕಿಮೊಥೆರಪಿ, ವಿಕಿರಣ ಮತ್ತು  ಶಸ್ತ್ರಚಿಕಿತ್ಸೆಯಂತಹ ಯಾವುದೇ ಚಿಕಿತ್ಸೆಗಳಿಗೆ ಒಳಗಾಗದೆ ಕ್ಯಾನ್ಸರ್‌ ನಿಂದ ಮುಕ್ತರಾಗಿದ್ದಾರೆ. ಈ ಪ್ರಯೋಗದ ಆವಿಷ್ಕಾರಗಳು ತಜ್ಞರನ್ನು ಬೆಚ್ಚಿಬೀಳಿಸಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ತಜ್ಞ ಡಾ ಅಲನ್ ಪಿ. ವೆನೂಕ್ ಈ ಬಗ್ಗೆ ಮಾತನಾಡಿ, ಪ್ರತಿಯೊಬ್ಬ ರೋಗಿಯು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಈ ಸಂಶೋಧನೆ “ಕ್ಯಾನ್ಸರ್‌ ನಿರ್ಮೂಲನೆಯಲ್ಲಿ ವಿಶ್ವದ ಮೊದಲ ಸಾಫಲ್ಯ ಪ್ರಯೋಗʼ ಎಂದು ಶ್ಲಾಘಿಸಿದ್ದಾರೆ.
ರೋಗಿಗಳು ಕ್ಯಾನ್ಸರ್ ಮುಕ್ತರಾಗಿದ್ದಾರೆಂದು ಕಂಡುಹಿಡಿದ ಕ್ಷಣವನ್ನು ವಿವರಿಸಿದ ಪ್ರುಯೋಗಾಲಯದ ಆಂಕೊಲಾಜಿಸ್ಟ್ ಡಾ ಆಂಡ್ರಿಯಾ ಸೆರ್ಸೆಕ್  “ರೋಗಿಗಳು ಸಂತೋಷ ತಾಳಲಾರದೆ ಕಣ್ಣೀರುಗರೆದರು” ಎಂದು ಹೇಳಿದರು.
ವೈದ್ಯರ ಪ್ರಕಾರ, ರೋಗಿಗಳು, ಪ್ರಯೋಗದ ಸಮಯದಲ್ಲಿ, ಆರು ತಿಂಗಳವರೆಗೆ ಪ್ರತಿ ಮೂರು ವಾರಗಳಿಗೊಮ್ಮೆ ದೋಸ್ಟಾರ್ಲಿಮಾಬ್ ಅನ್ನು ತೆಗೆದುಕೊಂಡರು. ಔಷಧವನ್ನು ಪರಿಶೀಲಿಸಿರುವ ಪ್ರಮುಖ ಕ್ಯಾನ್ಸರ್ ಸಂಶೋಧಕರು, ʼಈ ಚಿಕಿತ್ಸೆಯು ಭರವಸೆಯಂತೆ ಕಾಣುತ್ತದೆ, ಆದರೆ ಈ ಕುರಿತು ದೊಡ್ಡ ಪ್ರಮಾಣದ ಪ್ರಯೋಗ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!