H5N1 ಸೋಂಕು; ಹಸಿ ಕೋಳಿ ಮಾಂಸ ತಿಂದು ಎರಡು ವರ್ಷದ ಕಂದಮ್ಮ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಲ್ಲಿನ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯ ಎರಡು ವರ್ಷದ ಹೆಣ್ಣು ಮಗುವೊಂದು ಹಕ್ಕಿ ಜ್ವರದಿಂದ ಸಾವನ್ನಪ್ಪಿದೆ. ಆಂಧ್ರಪ್ರದೇಶದಲ್ಲಿ H5N1 ಸೋಂಕಿನಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.

ವರದಿಗಳ ಪ್ರಕಾರ, ಮಗು ಹಸಿ ಕೋಳಿ ಮಾಂಸವನ್ನು ಸೇವಿಸಿದೆ ಎಂದು ಹೇಳಲಾಗಿದೆ. ಮಗುವು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವುದರಿಂದ ಹಕ್ಕಿ ಜ್ವರ ಸೋಂಕು ಉಲ್ಭಣಗೊಂಡಿದೆ ಎಂದು ಶಂಕಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸಾವಿಗೆ ಕಾರಣವನ್ನು ಗುರುವಾರ ಅಧಿಕೃತವಾಗಿ ದೃಢಪಡಿಸಿದ್ದು, ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಮಗುವಿಗೆ ಮಾರ್ಚ್ 4ರಂದು ಜ್ವರ, ಉಸಿರಾಟದ ತೊಂದರೆ ಮತ್ತು ಇತರ ರೋಗಲಕ್ಷಣಗಳು ಕಂಡುಬಂದಿದ್ದು, ಮಂಗಳಗಿರಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಮಾರ್ಚ್ 16ರಂದು ಮಗು ಸಾವನ್ನಪ್ಪಿದೆ. ಆರೋಗ್ಯ ಅಧಿಕಾರಿಗಳು ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಪರೀಕ್ಷೆ ನಡೆಸಿದ ಬಳಿಕ H5N1 ವೈರಸ್ ತಗುಲಿರುವುದು ದೃಢಪಟ್ಟಿದೆ. ಹಕ್ಕಿ ಜ್ವರದಿಂದ ಮಾನವ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಯಾರೂ ಕೂಡ ಭಯಪಡದಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ಪರಿಶೀಲನೆ ಮತ್ತು ವೈದ್ಯರೊಂದಿಗೆ ಚರ್ಚೆ ನಡೆಸಲು ದೆಹಲಿಯಿಂದ ಕೇಂದ್ರ ತಜ್ಞರ ತಂಡವು ಮಂಗಳಗಿರಿಗೆ ಏಮ್ಸ್​ಗೆ ಭೇಟಿ ನೀಡಿದೆ. ತಂಡವು ಗುಂಟೂರಿನ ವಿಆರ್‌ಡಿಎಲ್ ಪ್ರಯೋಗಾಲಯದಲ್ಲೂ ಸಹ ಪರಿಶೀಲಿಸಲಿದ್ದು, ನರಸರಾವ್‌ಪೇಟೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!