ಹೊಸ ದಿಗಂತ ವರದಿ, ಭಟ್ಕಳ :
ರಾಜ್ಯದಲ್ಲಿ ಮೀನುಗಾರರಿಗೆ ನೀಡಲಾಗುತ್ತಿರುವ ಸಂಕಷ್ಟ ಪರಿಹಾರ ನಿಧಿ ಮೊತ್ತವನ್ನು 8 ಲಕ್ಷದಿಂದ 10 ಲಕ್ಷ ಕ್ಕೆ ಏರಿಕೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸರ್ಕಾರಕ್ಕೆ ಮೀನುಗಾರರ ಬದುಕು ಹಸನು ಮಾಡುವ ಆಸೆ ಇದೆ. ಮೀನುಗಾರರ ಮಕ್ಕಳು ಉದ್ಯೋಗ ಅರಸಿ ಹೊರ ಜಿಲ್ಲೆ , ರಾಜ್ಯಗಳಿಗೆ ಹೋಗುತ್ತಿದ್ದಾರೆ.ಕರಾವಳಿ ಪ್ರದೇಶದಲ್ಲಿ ಕೋಮು ವಾತಾವರಣಕ್ಕೆ ಅವಕಾಶ ನೀಡಬಾರದು. ಇಲ್ಲಿನ ಯುವಕರಿಗೆ ಉತ್ತಮ ಭವಿಷ್ಯ ಸೃಷ್ಟಿ ಮಾಡಿಕೊಳ್ಳಲು ಕರಾವಳಿ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಅವಕಾಶ ನೀಡಲಾಗುವುದು.ಈ ಭಾಗದ ಯುವಕರಿಗೆ ದೊಡ್ಡ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಮಾತನಾಡಿ, ಇಲಾಖೆಯಲ್ಲಿ ಮೀನುಗಾರರ ಅಭಿವೃದ್ಧಿ ಗೆ ಹಣದ ಕೊರತೆ ಇಲ್ಲ. 650 ಕೋಟಿ ವೆಚ್ಚದಲ್ಲಿ ಕರಾವಳಿ ಯ 13 ಬಂದರು ಅಭಿವೃದ್ಧಿ ಮಾಡಲಾಗುತ್ತಿದೆ. ಮೀನುಗಾರಿಕೆ ಮತ್ತು ಮೀನುಗಾರರ ಅಭಿವೃದ್ಧಿಗೆ ಸಕಲ ನೆರವು ನೀಡಲಾಗುವುದು ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಅರ್. ವಿ.ದೇಶಪಾಂಡೆ ,ಎಂ.ಸಿ.ಎ ಅಧ್ಯಕ್ಷ, ಶಾಸಕ ಸತೀಶ್ ಸೈಲ್, ಶಾಸಕರಾದ ಭೀಮಣ್ಣ ನಾಯಕ್, ಶಿವರಾಮ ಹೆಬ್ಬಾರ್,ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೆಕರ್, ತಿಪ್ಪಣ್ಣ ಕಬಕನೂರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣ ರಾವ್, ಕಾಯ್ಕಿಣಿ ಗ್ರಾ.ಪಂ ಅಧ್ಯಕ್ಷ ರಾಜು ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯ, ಜಿ.ಪಂ. ಸಿಇಒ ಈಶ್ವರ ಕಾಂದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.