October 16, 2026
Friday, October 16, 2026
spot_img

ಫಿಟ್ & ಫುಡ್ 16 | ಹೆಸರುಕಾಳಿನ ಗ್ರೀನ್ ಇಡ್ಲಿ: ರುಚಿಯ ಜೊತೆಗೆ ಪ್ರೋಟೀನ್‌ ಕೂಡ ನಿಮ್ಮ ತಟ್ಟೆಯಲ್ಲಿರಲಿ

ತಿಂಡಿಗೆ ಮಾಮೂಲಿ ಇಡ್ಲಿ, ದೋಸೆ ತಿಂದು ಬೇಜಾರು ಬಂದುಬಿಟ್ಟಿದ್ಯಾ? ಹಾಗಿದ್ರೆ ಹೆಸರುಕಾಳಿನಿಂದ ತಯಾರಿಸುವ ಗ್ರೀನ್ ಇಡ್ಲಿ ಒಮ್ಮೆ ಟ್ರೈ ಮಾಡಿ. ಪ್ರೋಟೀನ್, ನಾರಿನಂಶ ಮತ್ತು ಹಲವು ಪೋಷಕಾಂಶಗಳನ್ನು ಹೊಂದಿರುವ ಹೆಸರುಕಾಳಿನಿಂದ ತಯಾರಿಸುವ ಈ ಇಡ್ಲಿ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ಕೂಡ ಬೆಸ್ಟ್.

ಏನೆಲ್ಲಾ ಬೇಕು?

ಹೆಸರುಕಾಳು – 1 ಕಪ್
ಇಡ್ಲಿ ರವೆ – ½ ರಿಂದ ¾ ಕಪ್
ಮೆಂತ್ಯ ಬೀಜ – ½ ಟೀಸ್ಪೂನ್
ಹಸಿಮೆಣಸಿನಕಾಯಿ – 2
ಶುಂಠಿ – ಸಣ್ಣ ತುಂಡು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿರುವಷ್ಟು

ಮಾಡೋದು ಹೇಗೆ?

ಹೆಸರುಕಾಳು ಮತ್ತು ಮೆಂತ್ಯವನ್ನು ಚೆನ್ನಾಗಿ ತೊಳೆದು 4–5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ರಾತ್ರಿ ನೆನೆಸಿಟ್ಟರೂ ಸರಿ.

ಈಗ ನೆನೆಸಿದ ಹೆಸರುಕಾಳು, ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಹಿಟ್ಟು ತುಂಬಾ ನೀರಾಗದಂತೆ ನೋಡಿಕೊಳ್ಳಿ.

ಇಡ್ಲಿ ರವೆಯನ್ನು ನೆನೆಸಿ ನೀರನ್ನು ಹಿಂಡಿ, ರುಬ್ಬಿದ ಹಿಟ್ಟಿಗೆ ಸೇರಿಸಿ. ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ 15–20 ನಿಮಿಷ ಬಿಡಿ.

ಈಗ ಇಡ್ಲಿ ತಟ್ಟೆಗಳಿಗೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ಹಾಕಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಸಿ, ಮಧ್ಯಮ ಉರಿಯಲ್ಲಿ ಸುಮಾರು 10–15 ನಿಮಿಷ ಬೇಯಿಸಿ ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.

ಗ್ರೀನ್ ಇಡ್ಲಿಯ ಆರೋಗ್ಯ ಲಾಭ ಏನ್ ಗೊತ್ತಾ?

ಹೆಸರುಕಾಳಿನಲ್ಲಿ ಸಸ್ಯಜನ್ಯ ಪ್ರೋಟೀನ್‌ ಇದ್ದು, ಸ್ನಾಯುಗಳ ಬೆಳವಣಿಗೆ ಸಹಾಯ ಮಾಡುತ್ತದೆ.

ಹೆಸರುಕಾಳಿನಲ್ಲಿರುವ ಪ್ರೋಟೀನ್ ಮತ್ತು ನಾರಿನಂಶ ಹೊಟ್ಟೆ ತುಂಬಿದ ಅನುಭವವ ನೀಡುತ್ತದೆ. ಇದರಿಂದ ತೂಕ ನಿರ್ವಹಣೆಯಲ್ಲಿ ಬಹಳಷ್ಟು ಉಪಯುಕ್ತವಾಗುತ್ತದೆ.

ಹೆಸರುಕಾಳಿನಲ್ಲಿ ಫೋಲೇಟ್, ಕಬ್ಬಿಣ, ಮೆಗ್ನೀಷಿಯಂ ಮತ್ತು ಇತರ ಪೋಷಕಾಂಶಗಳಿವೆ. ಇವು ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ನೆರವಾಗುತ್ತವೆ.

Must Read