ಇಂದಿನ ಧಾವಂತದ ಜೀವನಶೈಲಿಯಲ್ಲಿ ಬೆಳ್ಳಂಬೆಳಗ್ಗೆ ಎದ್ದು ವಾಕ್ ಮಾಡಲು ಎಲ್ಲರಿಗೂ ಸಮಯ ಸಿಗುವುದಿಲ್ಲ. ಅಂತಹವರು ಆರಿಸಿಕೊಳ್ಳುವ ಮತ್ತೊಂದು ಉತ್ತಮ ಆಯ್ಕೆಯೆಂದರೆ ರಾತ್ರಿ ನಡಿಗೆ. ಆದರೆ, ರಾತ್ರಿ ಊಟದ ನಂತರ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಗೊಂದಲ ಹಲವರಲ್ಲಿದೆ. ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಮಿತವಾಗಿ ನಡಿಗೆ ಮಾಡುವುದು ದೇಹಕ್ಕೆ ಉತ್ತಮ. ರಾತ್ರಿ ನಡಿಗೆಯಿಂದ ಸಿಗುವ ಪ್ರಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಉತ್ತಮ ಜೀರ್ಣಕ್ರಿಯೆ:
ರಾತ್ರಿ ಊಟವಾದ ತಕ್ಷಣ ಮಲಗುವುದರಿಂದ ಗ್ಯಾಸ್, ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಊಟದ ನಂತರ 15-20 ನಿಮಿಷ ನಡೆಯುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ:
ರಾತ್ರಿ ನಡಿಗೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ರಾಮಬಾಣ.
ಗಾಢವಾದ ನಿದ್ರೆ:
ದಿನವಿಡೀ ಕಾಡುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಪ್ರಶಾಂತಗೊಳಿಸಲು ರಾತ್ರಿ ನಡಿಗೆ ಸಹಕಾರಿ. ಇದು ರಾತ್ರಿ ನಿಶ್ಚಿಂತೆಯಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ತೂಕ ನಿಯಂತ್ರಣ:
ರಾತ್ರಿ ಊಟದ ನಂತರ ಕ್ಯಾಲೊರಿಗಳನ್ನು ಬರ್ನ್ ಮಾಡಲು ಇದು ಸುಲಭವಾದ ಮಾರ್ಗವಾಗಿದೆ. ಇದರಿಂದ ಬೊಜ್ಜು ಮತ್ತು ತೂಕ ಹೆಚ್ಚಾಗುವ ಸಮಸ್ಯೆ ದೂರವಾಗುತ್ತದೆ.
ಹೃದಯದ ಆರೋಗ್ಯ:
ನಿಯಮಿತ ನಡಿಗೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಹೃದಯವನ್ನು ಆರೋಗ್ಯವಾಗಿಡುತ್ತದೆ.
ರಾತ್ರಿ ನಡಿಗೆಯನ್ನು ಹೇಗೆ ಮಾಡಬೇಕು?
ರಾತ್ರಿ ಸಮಯದಲ್ಲಿ ತುಂಬಾ ವೇಗವಾಗಿ ಓಡುವುದು ಅಥವಾ ಜಾಗಿಂಗ್ ಮಾಡುವುದು ಒಳ್ಳೆಯದಲ್ಲ. ಇದು ನಿದ್ರೆಗೆ ಭಂಗ ತರಬಹುದು. ಆದ್ದರಿಂದ ಅತ್ಯಂತ ನಿಧಾನವಾಗಿ ಹೆಜ್ಜೆ ಹಾಕಬೇಕು.
ಊಟದ ನಂತರ ಕೇವಲ 15 ರಿಂದ 30 ನಿಮಿಷಗಳ ಕಾಲ ನಡೆದರೆ ಸಾಕು. ಗಂಟೆಗಟ್ಟಲೆ ನಡೆಯುವ ಅಗತ್ಯವಿಲ್ಲ.
ಸುರಕ್ಷತೆಯ ದೃಷ್ಟಿಯಿಂದ ಚೆನ್ನಾಗಿ ಬೆಳಕಿರುವ ರಸ್ತೆಗಳು ಅಥವಾ ಮನೆಯ ಟೆರೇಸ್ (ಅಗಾಸಿ), ಕಾಂಪೌಂಡ್ ಒಳಗಡೆಯೇ ನಡೆಯುವುದು ಉತ್ತಮ.



