ಈಜಾಡಲು ಹೋಗಿ ನೀರುಪಾಲಾದ ಐವರು ಮೆಡಿಕಲ್‌ ವಿದ್ಯಾರ್ಥಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಐವರು ಮೆಡಿಕಲ್‌ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮದುವೆ ಸಮಾರಂಭಕ್ಕೆಂದು ಐವರು ವಿದ್ಯಾರ್ಥಿಗಳು ತೆರಳಿದ್ದರು. ಇದೇ ವೇಳೆ, ಲೆಮುರ್‌ ಬೀಚ್‌ನಲ್ಲಿ (Lemur Beach) ಈಜಾಡುವಾಗ ಐವರೂ ನೀರುಪಾಲಾಗಿದ್ದಾರೆ.

ಐವರಲ್ಲಿ ಇಬ್ಬರು ಯುವತಿಯರಿದ್ದರು ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಐವರೂ ತಿರುಚಿರಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್‌ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ.

ಮೃತರನ್ನು ತಂಜಾವೂರಿನ ಚಾರುಕವಿ, ನೇಯ್‌ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್‌, ದಿಂಡಿಗಲ್‌ನ ಪ್ರವೀಣ್‌ ಸ್ಯಾಮ್‌ ಹಾಗೂ ಆಂಧ್ರಪ್ರದೇಶದ ವೆಂಕಟೇಶ್‌ ಎಂಬುದಾಗಿ ಗುರುತಿಸಲಾಗಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಈಜಾಡಲು ಹೋಗಿದ್ದಾಗ ಐವರು ನೀರುಪಾಲಾಗಿದ್ದಾರೆ. ಇಂಟರ್ನ್‌ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕನ್ಯಾಕುಮಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇ. ಸುಂದರವದನಂ, ಲೆಮುರ್‌ ಬೀಚ್‌ ಖಾಸಗಿ ಬೀಚ್‌ ಆಗಿದ್ದು, ಇಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಭಾನುವಾರ (ಮೇ 5) ಮದುವೆಗೆ ಬಂದಿದ್ದ ವಿದ್ಯಾರ್ಥಿಗಳು ಅವರಲ್ಲೇ ಗುಂಪುಗಳಾಗಿ ಚದುರಿ ಹೋಗಿದ್ದಾರೆ. ಗೆಳೆಯರು ಸೇರಿ ಪ್ರವಾಸಿ ತಾಣಗಳಿಗೆ ಹೆಸರಾದ ಕನ್ಯಾಕುಮಾರಿಯನ್ನು ಸುತ್ತಲು ಮುಂದಾಗಿದ್ದಾರೆ. ಇವರಲ್ಲಿ ಎಂಟು ವಿದ್ಯಾರ್ಥಿಗಳು ಲೆಮುರ್‌ ಬೀಚ್‌ ಪ್ರವೇಶಿಸಿದ್ದಾರೆ. ಸಮುದ್ರದಲ್ಲಿ ಭಾರಿ ಅಲೆಗಳಿರುವ ಕಾರಣ ಪ್ರವೇಶ ನಿರಾಕರಿಸಲಾಗಿತ್ತು. ಹೀಗಿದ್ದರೂ ಅವರು ಹೇಗೆ ಹೋದರು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!