ಜಲಪಾತದಲ್ಲಿ ಕೊಚ್ಚಿಹೋದ ಒಂದೇ ಕುಟುಂಬದ ಐವರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಲಪಾತದಲ್ಲಿ ಒಂದೇ ಕುಟುಂಬದ ಮಹಿಳೆ ಮತ್ತು ನಾಲ್ವರು ಅಪ್ರಾಪ್ತ ವಯಸ್ಸಿನ ಮಕ್ಕಳು ಸೇರಿದಂತೆ ಐವರು ಕೊಚ್ಚಿಕೊಂಡು ಹೋಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಭಾನುವಾರ ಘಟನೆ ನಡೆದಿದೆ.

ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಉಳಿದ ಮೂವರಿಗಾಗಿ ರಕ್ಷಣಾ ತಂಡಗಳು ತೀವ್ರ ಶೋಧ ಕಾರ್ಯ ಕೈಗೊಂಡಿವೆ.

ಇಲ್ಲಿನ ಪ್ರಸಿದ್ಧ ಗಿರಿಧಾಮ ಲೋನಾವಾಲಾದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಸುಮಾರು 40 ವರ್ಷದ ಮಹಿಳೆ, 13 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. 6 ವರ್ಷದ ಇಬ್ಬರು ಬಾಲಕಿಯರು ಹಾಗೂ 4 ವರ್ಷದ ಬಾಲಕ ಇನ್ನೂ ಕಾಣೆಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಇವರೆಲ್ಲರೂ ಪುಣೆ ನಿವಾಸಿ ಅನ್ಸಾರಿ ಎಂಬುವರ ಕುಟುಂಬ ಸದಸ್ಯರಾಗಿದ್ದು, ಪ್ರವಾಸಕ್ಕೆಂದು ಬಂದಿದ್ದರು. ಭೂಶಿ ಅಣೆಕಟ್ಟಿನ ಸಮೀಪವಿರುವ ಗುಡ್ಡಗಾಡು ಕಾಡುಗಳಲ್ಲಿ ಹರಿಯುವ ಜಲಪಾತದಲ್ಲಿ ಆನಂದಿಸುತ್ತಿದ್ದರು.

ಭೂಶಿ ಅಣೆಕಟ್ಟಿನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತದಲ್ಲಿ ಮುಳುಗಿದ್ದಾರೆ. ಈ ವೇಳೆ, ಕುಟುಂಬ ಸದಸ್ಯರು ಪರಸ್ಪರ ರಕ್ಷಿಸಲು ಪ್ರಯತ್ನಿಸಿದರು. ಆದರೆ, ಭಾರೀ ಜಲಪಾತದಿಂದಾಗಿ ರಕ್ಷಿಸಲು ಸಾಧ್ಯವಾಗಲಿಲ್ಲ. ಈ ವಿಷಯ ತಿಳಿದ ತಕ್ಷಣವೇ ಸ್ಥಳೀಯ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!