ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾವಿರಾರು ಕೆರೆಗಳ ತಾಣವಾಗಿದ್ದ ಬೆಂಗಳೂರಿನಲ್ಲಿ ಅಭಿವೃದ್ಧಿಯ ನೆಪವೊಡ್ಡಿ ಸದ್ಯಕ್ಕೆ ಲೆಕ್ಕ ಇಡುವಷ್ಟು ಕೆರೆಗಳು ಮಾತ್ರ ಉಳಿದುಕೊಂಡಿವೆ. ಈ 210 ಕೆರೆಗಳ ಮೇಲೆ ಗಮನ ಕೇಂದ್ರೀಕರಿಸಿರುವ ಬಿಬಿಎಂಪಿ, ಮಾನಿಟರಿಂಗ್ ಮಾಡಲು ಆ್ಯಪ್ ಸಿದ್ಧಪಡಿಸಲು ಮುಂದಾಗಿದೆ. ಅದರಲ್ಲೂ ಇದಕ್ಕೆ ತಗುಲುವ ಒಟ್ಟು ವೆಚ್ಚ ಬರೋಬ್ಬರಿ ಹತ್ತು ಲಕ್ಷ ರೂಪಾಯಿ. ಈ ವಿಚಾರ ತಿಳಿದ ಪರಿಸರ ತಜ್ಞರು ಬಿಬಿಎಂಪಿಯನ್ನು ತರಾಟೆ ತೆಗೆದುಕೊಂಡಿದ್ದು, ಆ್ಯಪ್ ಬದಲು ಮೊದಲು ಇರುವ ಕೆರೆಗಳ ನಿರ್ವಹಣೆಯನ್ನು ಸರಿಯಾಗಿ ಮಾಡಿ, ಉಳಿದೆದ್ದಲ್ಲವೂ ಆಮೇಲೆ ಎಂದು ಚಾಟಿ ಬೀಸಿದ್ದಾರೆ.
ಬಿಬಿಎಂಪಿ ಸಿದ್ಧಪಡಿಸಲಿರುವ ಈ ಆ್ಯಪ್‌ನಲ್ಲಿ ಕೆರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಬೆಂಗಳೂರಿನಲ್ಲಿ ಒಟ್ಟು ಇರುವ ಕೆರೆಗಳೆಷ್ಟು? ಅವುಗಳ ವಿಸ್ತೀರ್ಣ, ಎಲ್ಲಿದೆ?, ಮಾರ್ಗ, ಕೆರೆಯ ಇತಿಹಾಸ, ನಿರ್ಮಾತೃ ಮುಂತಾದವುಗಳ ಬಗೆಗೆ ಮಾಹಿತಿ ಸಿಗಲಿದೆ. ಮಾಹಿತಿಯಷ್ಟೇ ಅಲ್ಲ, ಏನದರೂ ದೂರಗಳಿದ್ದಲ್ಲಿ ಸಾರ್ವಜನಿಕರು ಈ ಆ್ಯಪ್ ಮೂಲಕ ಅಧಿಕಾರಿಗಳ ಗಮನಕ್ಕೆ ತರಬಹುದಂತೆ.
ಇನ್ನೂ ಈ ವಿಚಾರ ಕುರಿತಂತೆ ಕೆಂಡಾಮಂಡಲರಾಗಿರುವ ಪರಿಸರ ತಜ್ಞರು, ಮೊದಲು ನಿಮ್ಮ ಆ್ಯಪ್ ಇರಲಿ ಕೆರೆಗಳನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಮಳೆಯಿಲ್ಲದೆ ಕೆರೆಗಳು ಬತ್ತಿ ಹೋಗುತ್ತಿವೆ. ನಗರದಲ್ಲಿನ ಗಾರ್ಬೇಜ್ ಎಲ್ಲವೂ ಕೆರೆಗಳ ಸುತ್ತ ಸುರಿಯುತ್ತಿದ್ದಾರೆ. ಕಾಲುವೆಗಳ ಕಲ್ಮಷ ನೀರು ಕೆರೆ ನೀರನ್ನು ಸೇರಿ ಅಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಈಗಿರುವ ಕೆರೆಗಳ ವೆಬ್‌ಸೈಟ್ ಬಗ್ಗೆಯೇ ಯಾರೂ ತಲೆಕೆಡಸಿಕೊಳ್ಳದಂತಾಗಿದೆ. ಅದರ ಜೊತೆ ಹೊಸದಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿ ಹೊಸ ಆ್ಯಪ್ ತಯಾರಿಸುವುದು ಬೇಕಾ? ಎಂದು ತರಾಟೆ ತೆಗೆದುಕೊಂಡಿದ್ದಾರೆ.