ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಬರೋಬ್ಬರಿ 90 ಲಕ್ಷ ರೂ. ದಂಡ ವಿಧಿಸಿದೆ.
ಅರ್ಹತೆ ಹೊಂದಿರದ ಸಿಬ್ಬಂದಿಯೊಂದಿಗೆ ವಿಮಾನಗಳನ್ನು ನಿರ್ವಹಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಜತೆಗೆ ಏರ್ ಇಂಡಿಯಾದ ನಿರ್ದೇಶಕರ ಕಾರ್ಯಾಚರಣೆ ಮತ್ತು ನಿರ್ದೇಶಕರ ತರಬೇತಿ ಸಂಸ್ಥೆಗೂ ನಾಗರಿಕ ವಿಮಾನಯಾನ ನಿಯಂತ್ರಕ ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ. ದಂಡ ವಿಧಿಸಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಪೈಲಟ್‌ಗೆ ಸೂಚಿಸಲಾಗಿದೆ ಎಂದು ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಏರ್ ಇಂಡಿಯಾ ವಿಮಾನ ತರಬೇತಿ ಹೊಂದಿರದ ಲೈನ್ ಕ್ಯಾಪ್ಟನ್ ಮತ್ತು ನಾನ್-ಲೈನ್-ರಿಲೀಸ್ಡ್ ಫಸ್ಟ್ ಆಫೀಸರ್‌ಗಳೊಂದಿಗೆ ಕಾರ್ಯ ನಿರ್ವಹಿಸಿದೆ. ಇದು ಸ್ಪಷ್ಟವಾದ ಸುರಕ್ಷತಾ ಮಾನದಂಡದ ಉಲ್ಲಂಘನೆ ಎನ್ನುವುದು ಗಮನಕ್ಕೆ ಬಂದಿದೆ. ಹೀಗಾಗಿ ದಂಡ ವಿಧಿಸಲಾಗಿದೆ’ʼ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿವರಿಸಿದೆ.
ಜುಲೈ 10ರಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಸಲ್ಲಿಸಿದ ಸ್ವಯಂಪ್ರೇರಿತ ವರದಿಯ ಮೂಲಕ ಈ ಘಟನೆ ಗಮನಕ್ಕೆ ಬಂದ ನಂತರ ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳು ಮತ್ತು ವೇಳಾಪಟ್ಟಿ ಸೌಲಭ್ಯದ ಸ್ಥಳ ಪರಿಶೀಲನೆ ಸೇರಿದಂತೆ ಕಾರ್ಯಾಚರಣೆಗಳ ತನಿಖೆ ನಡೆಸಿತು. ‘ತನಿಖೆಯ ಆಧಾರದ ಮೇಲೆ, ಹಲವಾರು ಪೋಸ್ಟ್ ಹೋಲ್ಡರ್‌ಗಳು ಮತ್ತು ಸಿಬ್ಬಂದಿಯಿಂದ ನಿಯಂತ್ರಕದ ಅನೇಕ ನಿಬಂಧನೆಗಳ ಉಲ್ಲಂಘನೆಯಾಗಿದೆ ಎನ್ನುವುದು ತಿಳಿದು ಬಂತು. ಈ ನಿರ್ಲಕ್ಷ್ಯ ಸುರಕ್ಷತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.
ಜುಲೈ 22ರಂದು ನೀಡಲಾದ ಶೋಕಾಸ್ ನೋಟಿಸ್‌ಗಳ ಮೂಲಕ ತಮ್ಮ ನಿಲುವನ್ನು ವಿವರಿಸಲು ವಿಮಾನದ ಕಮಾಂಡರ್ ಮತ್ತು ಏರ್‌ಲೈನ್‌ನ ಪೋಸ್ಟ್ ಹೋಲ್ಡರ್‌ಗಳಿಗೆ ಅವಕಾಶ ನೀಡಲಾಗಿತ್ತು ಎಂದು ಡಿಜಿಸಿಎ ತಿಳಿಸಿದೆ. ಅದಾಗ್ಯೂ ಅವರು ನೀಡಿದ ಉತ್ತರ ತೃಪ್ತಿಕರವಾಗಿರಲಿಲ್ಲ. ಹೀಗಾಗಿ ಡಿಜಿಸಿಎ ಅಸ್ತಿತ್ವದಲ್ಲಿರುವ ನಿಯಮಗಳು / ನಿಬಂಧನೆಗಳ ಪ್ರಕಾರ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅದರ ಭಾಗವಾಗಿ 99 ಲಕ್ಷ ರೂ. ದಂಡವನ್ನು ವಿಧಿಸಿದೆ. ನಿಯಮ ಉಲ್ಲಂಘನೆಗಾಗಿ ಡಿಜಿಸಿಎ ಏರ್ ಇಂಡಿಯಾಗೆ 90 ಲಕ್ಷ ರೂ., ವಿಮಾನಯಾನ ಕಾರ್ಯಾಚರಣೆ ನಿರ್ದೇಶಕರಿಗೆ 6 ಲಕ್ಷ ರೂ., ವಾಹಕದ ತರಬೇತಿ ನಿರ್ದೇಶಕರಿಗೆ 3 ಲಕ್ಷ ರೂ.ಗಳ ದಂಡ ವಿಧಿಸಿದೆ.