ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಆಗಸ್ಟ್ 13ರಿಂದ 15ರವರೆಗೆ ರಾಜ್ಯದಲ್ಲಿ ಎಲ್ಲರ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಟ ನಡೆಯಲಿದೆ. 13ರ ಬೆಳಿಗ್ಗೆ ರಾಷ್ಟ್ರಧ್ವಜ ಹಾರಿಸುವುದು ಹಾಗೂ 15ರಂದು ಸಂಜೆ ಧ್ವಜವನ್ನು ಇಳಿಸಲು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಮನವಿ ಮಾಡಿದರು.
ಇಂದು ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಮುಂದೆ ರಾಷ್ಟ್ರಧ್ವಜ ಮಾರಾಟ ಮಳಿಗೆಯನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಉದ್ಘಾಟಿಸಿದರು.
ಈ ವೇಳೆ ವಿವರಣೆ ನೀಡಿದ ರವಿಕುಮಾರ್, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು (ಆಜಾದಿ ಕಾ ಅಮೃತ ಮಹೋತ್ಸವ್) ಸಂಭ್ರಮದಿಂದ ದೊಡ್ಡ ಪ್ರಮಾಣದಲ್ಲಿ ಆಚರಿಸಲು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದೆ. ಅದೇರೀತಿಯಲ್ಲಿ ಬಿಜೆಪಿ ಕೂಡ ಸರಕಾರದ ಕರೆಗೆ ಓಗೊಟ್ಟು ನಮ್ಮ ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಇದಕ್ಕೆ ಸಿದ್ಧಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ವಿವರಿಸಿದರು.
ನಮ್ಮೆಲ್ಲ ಕಾರ್ಯಕರ್ತರು ಮತ್ತು ಸಾರ್ವಜನಿಕರು ರಾಷ್ಟ್ರಧ್ವಜ ಕೊಂಡುಕೊಂಡು ತಮ್ಮ ಮನೆ ಮೇಲೆ ಹಾರಿಸಬೇಕು. ಆ ಹಿನ್ನೆಲೆಯಲ್ಲಿ ರಾಜ್ಯದ ಪಕ್ಷದ ಎಲ್ಲ 39 ಸಂಘಟನಾ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಧ್ವಜ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
9 ರಿಂದ 15 ರವರೆಗೆ ನಮ್ಮೆಲ್ಲ ಬೂತ್, ಹೋಬಳಿ, ತಾಲ್ಲೂಕು ಕೇಂದ್ರಗಳಲ್ಲಿ ನೂರಾರು- ಸಾವಿರಾರು ಜನರು ಸೇರಿ ದೇಶಭಕ್ತಿಯ ಪಥಸಂಚಲನ ಪ್ರಭಾತ್ ಫೇರಿ ಮಾಡಬೇಕು. ಇದರಲ್ಲಿ ದೇಶಭಕ್ತಿ ಗೀತೆ, ವಂದೇ ಮಾತರಂ ಮತ್ತಿತರ ಗೀತೆಗಳನ್ನು ಪಠಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ, ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ, ವೃತ್ತದ ಅಲಂಕಾರ ಮಾಡುವುದಾಗಿ ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆಯನ್ನು ನಾಡು- ದೇಶಕ್ಕೆ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಗಲ್ಲು ಉಪಸ್ಥಿತರಿದ್ದರು.