ಹೊಸ ದಿಗಂತ ವರದಿ, ಮಂಗಳೂರು:
ಪ್ರವೀಣ್ ಹತ್ಯೆ ನಡೆದು 5 ದಿನಗಳ ಕಳೆದರೂ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಈಗ ರಾಜ್ಯ ಸರ್ಕಾರಕ್ಕೆ ತನ್ನ ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಾಗದೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ. ಇದು ರಾಜ್ಯ ಸರ್ಕಾರದ ವೈಫಲ್ಯವಾಗಿದ್ದು, ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಹತ್ಯೆಯಾದ ಬೆಳ್ಳಾರೆಯ ಮಸೂದ್, ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್‌ನ ಫಾಜಿಲ್ ಕುಟುಂಬವನ್ನು ಭಾನುವಾರ ಭೇಟಿ ಮಾಡಿ, ಸಾಂತ್ವನ ಹೇಳಿದ ಬಳಿಕ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸರಣಿ ಹತ್ಯೆ ನಡೆಯುತ್ತಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಆದ್ದರಿಂದ ಸಂವಿಧಾನದ 356ನೇ ವಿಧಿಯನ್ನು ಬಳಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಅವರು ರಾಜ್ಯಪಾಲರನ್ನು ಆಗ್ರಹಿಸಿದರು.
ಹಿಂದೆ ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ24 ಕೊಲೆ ನಡೆದಾಗ ಕಾಂಗ್ರೆಸ್ ಮೇಲೆ ಬಿಜೆಪಿಗರು ಗೂಬೆ ಕೂರಿಸಿದ್ದರು. ಈಗ ಅವರದೇ ಆಡಳಿತದಲ್ಲಿ ಸರಣಿ ಹತ್ಯೆ ನಡೆಯುತ್ತಿದೆ. ಪ್ರವೀಣ್ ಹತ್ಯೆ ತನಿಖೆಯನ್ನು ಎನ್‌ಐಎಗೆ ವಹಿಸಿರುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಈ ಹಿಂದೆ ಉತ್ತರ ಕನ್ನಡದಲ್ಲಿ ಪರೇಶ ಮೇಸ್ತ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿ ವರ್ಷಗಳೇ ಕಳೆದರೂ ಯಾರನ್ನೂ ಇದುವರೆಗೆ ಬಂಧಿಸಿಲ್ಲ. ಪ್ರವೀಣ್ ಘಟನೆಯ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸುವ ಮೂಲಕ ಸಿಎಂ ತಮ್ಮ ಆಡಳಿತ ವೈಫಲ್ಯವನ್ನು ತಾವೇ ಒಪ್ಪಿಕೊಂಡಂತೆ ಆಗಿದೆ. ಪ್ರವೀಣ್ ಕುಟುಂಬಕ್ಕೆ ನೀಡಿದಂತೆ ಹತ್ಯೆಯಾದ ಇತರ ಇಬ್ಬರ ಕುಟುಂಬಕ್ಕೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಮಾಜಿ ಮೇಯರ್ ಕವಿತಾ ಸನಿಲ್, ಮುಖಂಡರಾದ ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ರಕ್ಷಿತ್ ಶಿವರಾಮ್, ಲುಕ್ಮಾನ್, ನಝೀರ್ ಬಜಾಲ್ ಇದ್ದರು.