ಪ್ರತೀ ಶನಿವಾರ ಮನೆಯನ್ನು ಗುಡಿಸಿ, ಒರೆಸಿ, ಪೂಜೆ ಮಾಡಿ, ಶನಿದೇವರ ದೇಗುಲಕ್ಕೆ ತೆರಳಿ ಬರುವುದರಿಂದ ನಮ್ಮ ಬದುಕಿನ ಮೇಲೆ ಶನಿದೇವರ ಆಶೀರ್ವಾದ ಇರುತ್ತದೆ ಎನ್ನುವುದು ಭಕ್ತರ ನಂಬಿಕೆ.
ಶನಿ ದೇವರ ಕೋಪದ ದೃಷ್ಟಿ ಬಿದ್ದರೆ ರಾಜನೂ ಅಳಿದು ಹೋಗಬಹುದು ಮತ್ತು ಶನಿ ದೇವರ ಆಶೀರ್ವಾದವಿದ್ದರೆ ಬಡತನ ಮನೆಯಲ್ಲಿಯೂ ಸಂತೋಷಕ್ಕೆ ಕೊರತೆಯಾಗದು. ಶನಿ ದೇವರ ಅನುಗ್ರಹವನ್ನು ಪಡೆಯುವುದು ಸುಲಭವಲ್ಲ. ನಿಷ್ಠೆ ಮತ್ತು ಶುದ್ಧ ಹೃದಯದಿಂದ ಮಾಡಿದ ಕೆಲಸಗಳಿಗೆ ಮಾತ್ರ ಶನಿ ದೇವರು ಸಂತುಷ್ಠರಾಗುತ್ತಾರೆ. ಹೀಗಾಗಿ, ಕಟ್ಟುನಿಟ್ಟಿನ ಶುದ್ಧಾಚಾರ ಮತ್ತು ನಿರ್ಮಲ ಮನಸ್ಸಿನಿಂದ ದೇವರ ಪೂಜೆಯಲ್ಲಿ ತೊಡಗಿಕೊಳ್ಳುವುದು ಬಲು ಮುಖ್ಯ.
ಶನಿವಾರದಂದು ಶನಿ ದೇವನನ್ನು ಪೂಜಿಸಿ ನಂತರ ಈ ರೀತಿಯ ಕೆಲಸಗಳನ್ನು ಮಾಡಿದರೆ ಶನಿದೇವರ ಕೃಪೆಗೆ ಪಾತ್ರರಾಗುತ್ತೇವೆ.
ದಾಂಪತ್ಯ ಜೀವನ ಸುಖಮಯವಾಗಿರಲು ಶನಿವಾರದಂದು ಸ್ವಲ್ಪ ಕಪ್ಪು ಎಳ್ಳನ್ನು ಅರಳಿ ಮರದ ಬಳಿ ಅರ್ಪಿಸಿ. ಬಳಿಕ ಅರಳಿ ಮರಕ್ಕೆ ನೀರನ್ನು ಅರ್ಪಿಸಿ. ಎಣ್ಣೆಯಿಂದ ಮಾಡಿದ ಆಹಾರವನ್ನು ಶನಿವಾರ ಬಡವರಿಗೆ ದಾನ ಮಾಡಿದರೆ ದೇವರು ಪ್ರಸನ್ನರಾಗುತ್ತಾರೆ ಎಂಬುದು ನಂಬಿಕೆ. ಶನಿವಾರ ಕಪ್ಪು ಎಳ್ಳು ಉಂಡೆಯನ್ನು ಬಡವರಿಗೆ ದಾನ ಮಾಡುವುದು ಕೂಡಾ ಉತ್ತಮ ಎಂದು ಹೇಳಲಾಗುತ್ತದೆ. ಶನಿವಾರದಂದು ಸುಂದರಕಾಂಡ ಪಾರಾಯಣ ಕೂಡಾ ಮಂಗಳಕರ ಎಂಬ ನಂಬಿಕೆ ಇದೆ. ಹಿಂದೂ ಧರ್ಮೀಯರ ನಂಬಿಕೆಯ ಪ್ರಕಾರ, ಸುಂದರಕಾಂಡವನ್ನು ಪಠಿಸುವವರ ಆಸೆಗಳು ಶೀಘ್ರದಲ್ಲೇ ಈಡೇರುತ್ತದೆ. ಶನಿವಾರ ಕಪ್ಪು ಶ್ವಾನ ಮತ್ತು ಕಪ್ಪು ಹಸುವಿಗೆ ಆಹಾರ ನೀಡುವುದು ಹಾಗೂ ಕಪ್ಪು ಹಕ್ಕಿಗೆ ಧಾನ್ಯವನ್ನು ಹಾಕುವುದು ಮಂಗಳಕರ ಎಂಬುದು ನಂಬಿಕೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.