ಹೊಸ ದಿಗಂತ ವರದಿ, ಶಿವಮೊಗ್ಗ:
ಎರಡು ನಿಮಿಷದಲ್ಲಿ ಎಷ್ಟು ಬಾಳೆ ಹಣ್ಣು, ಎಷ್ಟು ಕೊಟ್ಟೆ ಕಡುಬುಗಳನ್ನು ತಿನ್ನಬಹುದು? ಎರಡು, ಮೂರು ಅಥವಾ ನಾಲ್ಕು?
ಇಲ್ಲೊಂದಿಷ್ಟು ಮಂದಿ 8 ಬಾಳೆಹಣ್ಣು ತಿಂದು ಸೈ ಎನಿಸಿಕೊಂಡರು. 8 ಕೊಟ್ಟೆ ಕಡುಬು ತಿಂದು ಸಾಧನೆ ಮೆರೆದರು ! ಕಡುಬು ಖಾಲಿ ಆಯ್ತು ಬೇಗ ಬೇಗ ತನ್ನಿ, ಸಾಂಬರ್ ಹಾಕಿ, ಬಾಳೆಹಣ್ಣು ಕೊಡಿ, ನೀರು ಕೊಡ್ರಾಪ್ಪ ಸಾಕಾಯ್ತು..ಎಂಬ ಚಿತ್ರಣಗಳು ಕಂಡುಬಂದವು.
ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗಿ ಆಹಾರ ದಸರಾ-2023ರ ಕಾರ್ಯಕ್ರಮದಲ್ಲಿ ಸೋಮವಾರ ಸಾರ್ವಜನಿಕರಿಗೆ 2 ನಿಮಿಷದಲ್ಲಿ ಕೊಟ್ಟೆ ಕಡುಬು- ಅವರೇಕಾಳು ಸಾಂಬಾರ್ ತಿನ್ನುವ ಸ್ಪರ್ಧೆ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು.
ಕೊಟ್ಟೆ ಕಡುಬು ಮತ್ತು ಅವರೇಕಾಳು ಸಾಂಬಾರ್ ತಿನ್ನುವ ಸ್ಪರ್ಧೆಯ ಮಹಿಳಾ ವಿ‘ಾಗದಲ್ಲಿ ಅಣ್ಣಾನಗರ 5ನೇ ಕ್ರಾಸ್‌ನ ಶಿವಮ್ಮ 8 ಕಡುಬು ತಿನ್ನುವ ಮೂಲಕ ಪ್ರಥಮಸ್ಥಾನ ಪಡೆದರು.
ಹೊಸಮನೆ ಜ್ಯೋತಿ ಶ್ರೀನಿವಾಸ ದ್ವಿತೀಯ, ಪ್ರಿಯದರ್ಶಿನಿ ಲೇಔಟ್ ಎಸ್.ಗೀತಾ ಶರಣಪ್ಪ ತೃತೀಯ ಸ್ಥಾನ ಪಡೆದರು. ಎಸ್.ಗೀತಾ, ರಾಜೇಶ್ವರಿ ಮತ್ತು ಬಿ.ಜಿ.ಗೀತಾ ತಲಾ ಆರು ಕಡುಬು ತಿಂದು ಸಮಬಲ ಸಾಸಿದ್ದರು. ಈ ವೇಳೆ ಪುನಃ ಮೂವರಿಗೂ ಮರು ಸ್ಪರ್ಧೆ ಏರ್ಪಡಿಸಿದಾಗ ಎಸ್.ಗೀತಾ ಗೆಲುವು ಪಡೆದರು.
ಪುರುಷರ ವಿಭಾಗದಲ್ಲಿ ಎರಡು ನಿಮಿಷದಲ್ಲಿ ಆರು ಕಡುಬು ತಿಂದ ಗಾಡಿಕೊಪ್ಪ ವಿನೋದ್ ಪ್ರಥಮ ಸ್ಥಾನ ಪಡೆದರೆ, ಹೊಸಮನೆ ರವಿಕಿರಣ್ ಐದೂವರೆ ಕಡುಬು ತಿಂದು ದ್ವಿತೀಯ ಸ್ಥಾನ ಪಡೆದರು. ತಲಾ ಐದು ಕುಡುಬು ತಿಂದ ಬಿ.ಬೀರನಹಳ್ಳಿಯ ರಂಗನಾಥ ಮತ್ತು ಬೊಮ್ಮನಕಟ್ಟೆಯ ನಾಗರಾಜ್ ನಡುವೆ ಪುನಃ ಮರು ಸ್ಪರ್ಧೆ ನಡೆದು, ನಾಗರಾಜ್ ಗೆಲುವು ಸಾಧಿಸಿದರು.