ಪೂರಿ ಎಲ್ಲರು ಮೆಚ್ಚಿಕೊಳ್ಳುವ ತಿಂಡಿ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇದನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮೆಂತ್ಯ ಸೊಪ್ಪು ಹೆಚ್ಚಾಗಿ ಯಾರು ಇಷ್ಟ ಪಡೋದಿಲ್ಲ. ಇವತ್ತು ಇವೆರಡನ್ನು ಬಳಸಿಕೊಂಡು ಇಷ್ಟ ಇಲ್ಲದವರು ಕೂಡ ಬಾಯಿ ಚಪ್ಪರಿಸಿಕೊಂಡು ತಿನ್ನುವಂತೆ ಮೆಂತ್ಯ ಸೊಪ್ಪಿನ ಪೂರಿ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು
ಗೋಧಿ ಹಿಟ್ಟು – ಎರಡು ಕಪ್
ಮೆಂತ್ಯ ಸೊಪ್ಪು- ಒಂದು ಕಪ್
ಕಡಲೆ ಹಿಟ್ಟು – ಅರ್ಧ ಕಪ್
ಎಣ್ಣೆ – ಕರಿಯಲು ಬೇಕಾದಷ್ಟು
ಇಂಗು – ಚಿಟಿಕೆ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ – ಅರ್ಧ ಚಮಚ
ಮೆಣಸಿನಪುಡಿ – ಒಂದು ಚಮಚ
ಮಾಡುವ ವಿಧಾನ
ಮೊದಲಿಗೆ ಮೆಂತ್ಯ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
ಈಗ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು, ಕಡಲೆ ಹಿಟ್ಟು, ಉಪ್ಪು, ಮೆಣಸಿನ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಎರಡು ಚಮಚ ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ತೊಳೆದು ಕತ್ತರಿಸಿದ ಮೆಂತ್ಯ ಸೊಪ್ಪನ್ನು ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರು ಬೆರೆಸಿ, ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ಕಲಸಿಟ್ಟ ಹಿಟ್ಟಿನಲ್ಲಿ ಪೂರಿಗಳನ್ನು ಮಾಡಿ ಎಣ್ಣೆಯಲ್ಲಿ ಕರಿದರೆ ಮೆಂತ್ಯ ಸೊಪ್ಪಿನ ಪೂರಿ ರೆಡಿ.