ಮನೆಯಲ್ಲಿ ಹೆಚ್ಚು ಪದಾರ್ಥಗಳಿಲ್ಲದೆ, ಅರ್ಧ ಕಪ್ ಮೊಸರು ಇದ್ದರೆ ಸಾಕು ರುಚಿಯಾದ ಮಜ್ಜಿಗೆ ಹುಳಿ ಮಾಡಬಹುದು. ಬಿಸಿ ಅನ್ನದ ಜೊತೆ ತಿಂದರೆ ಇನ್ನಷ್ಟು ರುಚಿ ನೀಡುತ್ತದೆ. ಬೇಗನೆ ತಯಾರಾಗುವ ಈ ರೆಸಿಪಿ ಲೈಟ್ ಆಗಿದ್ದು, ಜೀರ್ಣಕ್ಕೂ ಸಹಾಯಕ.
ಬೇಕಾಗುವ ಪದಾರ್ಥಗಳು:
ಮೊಸರು – ಅರ್ಧ ಕಪ್
ನೀರು – 1 ಕಪ್
ಕಡಲೆಹಿಟ್ಟು – 1 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ – 2
ಶುಂಠಿ – ಸ್ವಲ್ಪ
ಅರಿಶಿಣ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ
ಮಾಡುವ ವಿಧಾನ:
ಮೊದಲು ಒಂದು ಬಟ್ಟಲಿನಲ್ಲಿ ಮೊಸರು, ನೀರು ಮತ್ತು ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಕಲೆಸಿ ಮಿಶ್ರಣ ತಯಾರಿಸಿಕೊಳ್ಳಿ. ಇದಕ್ಕೆ ಅರಿಶಿಣ ಮತ್ತು ಉಪ್ಪು ಸೇರಿಸಿ.
ನಂತರ ಹಸಿಮೆಣಸಿನಕಾಯಿ ಹಾಗೂ ಶುಂಠಿಯನ್ನು ಸಣ್ಣದಾಗಿ ರುಬ್ಬಿ ಅದನ್ನು ಮಿಶ್ರಣಕ್ಕೆ ಸೇರಿಸಿ. ಈಗ ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಇಟ್ಟು ನಿಧಾನವಾಗಿ ಕುದಿಯಲು ಬಿಡಿ. ನಡುವೆ ಮಧ್ಯೆ ಕೈಯಾಡಿಸುತ್ತಿರಬೇಕು, ಇಲ್ಲವಾದರೆ ಗಂಟಾಗಬಹುದು.
ಇದನ್ನೂ ಓದಿ:
ಇನ್ನೊಂದು ಕಡೆ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಒಣ ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಈ ಒಗ್ಗರಣೆಯನ್ನು ಕುದಿಯುತ್ತಿರುವ ಮಜ್ಜಿಗೆ ಹುಳಿಗೆ ಸೇರಿಸಿ. ಸ್ವಲ್ಪ ಹೊತ್ತು ಕುದಿದ ನಂತರ ಉರಿಯಿಂದ ಇಳಿಸಿ. ಬಿಸಿ ಅನ್ನದ ಜೊತೆ ಈ ಸಿಂಪಲ್ ಮಜ್ಜಿಗೆ ಹುಳಿ ತಿನ್ನಲು ಸಿದ್ಧ!



